ಹೆಂಡತಿ
ಅಂದರೆ ಖಂಡಿತ ಅಲ್ಲ
ದಿನವೂ
ಕೊರೆಯುವ ಭೈರಿಗೆ!
ಭಂಡರು
ಯಾರೋ ಆಡುವ ಮಾತಿದು,
ಬೈದವರುಂಟೆ
ದೇವಿಗೆ?!
ಸಣ್ಣ
ಸಂಬಳದ ದೊಡ್ಡ ಗಂಡನನು
ಸಾಕುವ
ಹೆಣ್ಣಿನ ಕಷ್ಟ!
ಹೆಣ್ಣಿಗೆ
ಮಾತ್ರವೇ ಗೊತ್ತು
ಸಾಕಿ
ಬೈಸಿಕೊಳ್ಳೊ ಅನಿಷ್ಟ!
ಹೆಂಡತಿ
ಅಂದರೆ ಖಂಡಿತ ಅಲ್ಲ
ಭಾರೀ
ಕತ್ತರಿ ಜೇಬಿಗೆ!
ಬಿರಡೆಯಲ್ಲವೆ,
ಅವಳು ಗಂಡಿನ
ದುಂದುಗಾರಿಕೆಯ
ತೂಬಿಗೆ!
ಹೆಂಡತಿಯೆಂದರೆ
ಚಂಡಿಕೆಯಂತೆ
ಬೋಳು
ಬೋಳಾದ ಬಾಳಿಗೆ!
ಅರಳಿದ
ಗರಿ ಗರಿ ಸಂಡಿಗೆಯಂತೆ
ಬಿಸಿ
ಬಿಸಿ ಅನ್ನದ ಸಾರಿಗೆ!
ಅನ್ನಿಸಿಕೊಂಡೂ
ಮನ್ನಿಸಿ ನಗುವ
ಹೆಂಡತಿ
ಕೇವಲ ಹೆಣ್ಣೇ!
ಗಂಡತಿ
ಕೂಡಾ ಹೌದು ಅವಳನು
ಅನ್ನುವ
ಬಾಯಿ ಮಣ್ಣೆ!
ಹೆಂಡತಿ
ಎಂದರೆ ಒಳಗಿನ ಹರುಕನು
ಮರೆಸುವ
ಬಣ್ಣದ ಶಾಲು!
ಮೆಟ್ಟೂ
ಆಗಿ ಜುಟ್ಟೂ ಆಗಿ
ಕಾಯುವಂತ
ಕರುಣಾಳು!
- ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ