ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ
ಯಾಕೆ ಕಡಲು ದಡ ಮೀರದೆ ನಿಂತಿದೆ ತಾಳಿ;
ನೆಲಕೆ ಯಾಕೆ ಮಳೆ ಹೂಡಲೆ ಬೇಕು ದಾಳಿ
ನಗುವ ಯಾಕೆ ಯಮ ಜೀವಗಳೆಲ್ಲವ ಹೂಳಿ?
ಹೇಗೆ ಚಿಗುರುವುದು ಬೋಳು ಗಿಡದಿಂದ ಹಸಿರು
ಹೇಗೆ ಸೇರುವುದು ದೇಹ ದೇಹದಲಿ ಉಸಿರು;
ಯಾವುದು ಈ ವಿಶ್ವವನೆ ಪೊರೆಯುವ ಬಸಿರು
ಚುಕ್ಕಿ ಸಾಲಿನಲಿ ಹೊಳೆಯುವುದದಾರ ಹೆಸರು?
ಯಾರು ಕರೆಸುವರು ತಪ್ಪದೆ ಪ್ರತಿದಿನ ಸೂರ್ಯನ
ಯಾರು ಕಳಿಸುವರು ಬಾನಿಗೆ ಹುಣ್ಣಿಮೆ ಚಂದ್ರನ;
ಫಳ ಫಳ ಹೊಳೆಯುವ ತಾರೆಗೆ ಯಾರೋ ಕಾರಣ
ಬುಗುರಿ ಆಡಿಸುವರಾರೋ ಭೂಮಿಯ ದಿನ ದಿನ ?
ಅದನು ಕಾಣುವ ಆಸೆಯು ಕಾಡಲಿ ಕಣ್ಣನು
ಅದನೆ ಕೇಳುವ ಆಸೆಯು ಕವಿಯಲಿ ಕಿವಿಯನು
ಅದನು ಅರಿಯುವ ಬಯಕೆಯು ಬರೆಸಲಿ ಹಾಡನು
ಅದರೊಳು ಬೆರೆಯುವ ಹುಚ್ಚಿಗೆ ತಿನಿಸುವೆ ಬಾಳನು
- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
http://f.cl.ly/items/1I1I0j1T3H15463l0K45/yaake%20heege%20beesuttirabeku%20gaali.mp3
http://f.cl.ly/items/1I1I0j1T3H15463l0K45/yaake%20heege%20beesuttirabeku%20gaali.mp3
No comments:
Post a Comment