ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Sunday, 24 February 2013

ಪಾತರಗಿತ್ತೀ ಪಕ್ಕಾ / paataragitti pakka

ಪಾತರಗಿತ್ತೀ ಪಕ್ಕಾ
ನೋಡೀದೇನS  ಅಕ್ಕಾ!  ॥ ಪ ॥


ಹಸಿರು ಹಚ್ಚಿ ಚುಚ್ಚಿ
ಮೇಲSಕರಿಸಿಣ ಹಚ್ಚಿ,

ಹೊನ್ನ ಚಿಕ್ಕಿ ಚಿಕ್ಕಿ
ಇಟ್ಟು ಬೆಳ್ಳೀ ಅಕ್ಕಿ,

ಸುತ್ತೂ ಕುಂಕುಮದೆಳಿ
ಎಳೆದು ಕಾಡಿಗೆ ಸುಳಿ,

ಗಾಳೀ ಕೆನೀಲೇನS
ಮಾಡಿದ್ದಾರ ತಾನ!
೫  
ನೂರು ಆರು ಪಾರು
ಯಾರು ಮಾಡಿದ್ದಾರು!

ಏನು ಬಣ್ಣ ಬಣ್ಣ
ನಡುವೆ ನವಿಲಗಣ್ಣ!

ರೇಶಿಮೆ ಪಕ್ಕ ನಯ
ಮುಟ್ಟಲಾರೆ ಭಯ!

ಹೂವಿನ ಪಕಳಿಗಿಂತ
ತಿಳಿವು ತಿಳಿವು ಅಂತ?

ಹೂವಿಗೆ ಹೋಗಿ ತಾವ
ಗಲ್ಲಾ ತಿವಿತಾವ,
೧೦
ಬನ ಬನದಾಗ ಆಡಿ
ಪಕ್ಕಾ ಹುಡಿ ಹುಡಿ;
೧೧
ಹುಲ್ಲುಗಾವುಲದಾಗ
ಹಳ್ಳೀಹುಡುಗೀ ಹಾಂಗ -
೧೨
ಹುಡದೀ ಹುಡದೀ ಭಾಳ
ಆಟಕ್ಕಿಲ್ಲ ತಾಳ.
೧೩
ಕಿರೇ ಸೂರೇ ಪಾನ.
ದಲ್ಲಿ ಧೂಳಿಸ್ನಾನ.
೧೪
ತುರುಬಿ ತುಂಬಿ ತೋಟ -
ದಲ್ಲಿ ದಿನದ ಊಟ.
೧೫
ಕಳ್ಳಿ ಹೂವ ಕಡಿದು
ಹೂತುಟಿನೀರ ಕುಡಿದು;
೧೬
ನಾಯಿ ಛತ್ತರಿಗ್ಯಾಗ
ಕೂತು ಮೊಜಿನ್ಯಾಗ,
೧೭
ರುದ್ರಗಂಟಿ ಮೂಸಿ
ವಿಷ್ಣುಗಂಟಿ ಹಾಸಿ,
೧೮
ಹೇಸಿಗೆ ಹೂವ ಬಳಿಗೆ
ಹೋಗಿ ಒಂದSಗಳಿಗೆ,
೧೯
ಮದಗುಣಿಕಿಯ ಮದ್ದು 
ಹುರುಪಿಗಿಷ್ಟು ಮೆದ್ದು,
೨೦
ಕಾಡ ಗಿಡ ಗಂಟಿ
ಅಂಚಿಗಂಟಿ ಗಿಂಟಿ,
೨೧ 
ಸೀಗಿಬಳ್ಳಿ ತಾಗಿ 
ಪಕ್ಕಾ ಬೆಳ್ಳಗಾಗಿ,
೨೨  
ಗೊರಟಿಗೆಗೆ ಶರಣ 
ಮಾಡಿ ದೂರಿಂದS 
೨೩
ಮಾಲಿಂಗನ ಬಳ್ಳಿ 
ತೂಗೂ ಮಂಚದಲ್ಲಿ,
೨೪  
ತೂಗಿ ತೂಗಿ ತೂಗಿ 
ದಣಿದ್ಹಾಂಗ ಆಗಿ,
೨೫ 
ಬೇಲೀ ಬಳ್ಳಿಯೊಳಗ 
ಅದರ ನೆರಳ ತೆಳಗ 
೨೬ 
ನಿದ್ದಿಗುಳ್ಯಾಡಿ 
ಪಗಡಿ ಪಕ್ಕಾ ಆಡಿ,
೨೭  
ಗುಲಬಾಕ್ಷಿಯ ಹೂವ 
ಕುಶಲ ಕೇಳತಾವ;
೨೮ 
ಹುಡಿಯ ನೀರಿನ್ಯಾಗ 
ತುಳಕಿಸುತ್ತ ಬ್ಯಾಗ 
೨೯ 
ಹಡಿಯೆ ಬೀಜ ಗಂಡು 
ಹಾರಹರಿಕಿ ಅಂದು,
೩೦  
ಅಡವಿ ಮಲ್ಲಿಗಿ ಕಂಡು 
ಅದರ ಕಂಪನುಂಡು,
೩೧  
ಹುಲ್ಲ ಹೊಲಕ ಬಂದು 
ಗುಬ್ಬಿ ಬೆಳಸಿ ತಿಂದು,
೩೨ 
ಇಷ್ಟು ಎಲ್ಲಾ ಮಾಡಿ 
ಸಪ್ಪಳಿಲ್ಲದಾಡಿ,
೩೩ 
ತಾಳ ಚವ್ವ ಚಕ್ಕ 
ಕುಣಿತ ತಕ್ಕ ತಕ್ಕ;
೩೪ 
ಆಸಿ ಹಚ್ಚಿ ಹ್ಯಾಂಗ 
ಕಂಡು ಸಿಕ್ಕಧಾಂಗ 
೩೫ 
ಸಿಕ್ಕಲ್ಲೋಡತಾವ
ಅಲ್ಯೂ ಇಲ್ಯೂ ಅವS
೩೬ 
ಕಾಣದೆಲ್ಲೋ ಮೂಡಿ 
ಬಂದು ಗಾಳಿ ಗೂಡಿ,
೩೭ 
ಇನ್ನು ಎಲ್ಲಿಗೋಟ?
ನಂದನದ ತೋಟ!


                                                  - ಅಂಬಿಕಾತನಯದತ್ತ 

* ಇದು ಮೂಲ ಕವನದ ಪೂರ್ಣಪಾಠ. ಆಯ್ದ ಕೆಲವೇ ಕೆಲವು ಚರಣಗಳನ್ನು ಭಾವಗೀತೆಯಲ್ಲಿ ಬಳಸಿಕೊಳ್ಳಲಾಗಿದೆ. ಗೀತೆ ಸಿಕ್ಕೊಡನೆ ಹಂಚಿಕೊಳ್ಳುತ್ತೇನೆ - ವಸು.  



1 comment:

  1. ನಿಮ್ಮ ಪ್ರಯತ್ನಕ್ಕೊ೦ದು ದೊಡ್ಡ ಸಲಾಮ್. ಪ್ರೈಮರಿ ಸ್ಕೂಲ್ ಗೆ ಹೋಗುತ್ತಿರುವಾಗ ರೇಡಿಯೋದಲ್ಲಿ ಬರುತ್ತಿತ್ತು. ಕೇಳಿ ಮನಸ್ಸು ಪಾತರಗಿತ್ತಿಯ೦ತೆಯೇ ಹಾರುತ್ತಿತ್ತು.

    ReplyDelete