ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು,
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು.
ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ;
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ.
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ;
ಇನ್ನು ತಂಗಿಯ ಮದುವೆ ತಿಂಗಳಿಹುದು.
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ,
ಐದು ತಿಂಗಳ ಕಂದ ನಗುತಲಿಹುದು.
ಕಣ್ಣೆದುರಿಗಿರುವಾಗ ನಿಮ್ಮ ಮನವುಕ್ಕುವುದು
ಕ್ಷೀರಸಾಗರದಂತೆ ಶಾಂತಿಯೊಳಗೆ.
ಕಣ್ಣ ಮರೆಯಾದಾಗ ಹೂವೆಲ್ಲ ಹಾವೆಂದು
ಬಿರುನುಡಿಯನಾಡುವುದು ನಿಮಗೆ ತರವೆ?
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ.
ನಾಳೆ ಮಂಗಳವಾರ; ಮಾರನೆಯ ದಿನ ನವಮಿ;
ಆಮೇಲೆ ನಿಲ್ಲುವೇನೆ ನಾನು ಇಲ್ಲೇ?
ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳುಹುವರು,
ಕಂದನಿಗೆ ಹೊಸ ಜರಿಯ ಲಂಗವುಡಿಸಿ.
ತಂದೆಯವರೇ ಬಂದು ತಪ್ಪಾಯಿತೆನ್ನುವರು;
ಹೆಣ್ಣ ಹೆತ್ತವರನ್ನು ದೂರಬೇಡಿ.
ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು.
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ,
ಚುಚ್ಚದಿರಿ ಮೊನೆಯಾದ ಮಾತನೆಸೆದು.
- ಕೆ. ಎಸ್. ನರಸಿಂಹ ಸ್ವಾಮಿ
ವಸು, ತಂಗಿಯ ಮದುವೆ ಎಂದು ತಿದ್ದಿರಿ
ReplyDeleteಕಣ್ತಪ್ಪಿನಿಂದಾದ ಕಾಗುಣಿತದ ದೋಷ, ಗಮನಕ್ಕೇ ಬಂದಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು. - ವಸು
Delete4ne saalina " ನೆನಸೇ" badalagi "Nenape" antha barbeku ansatte
ReplyDelete