ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 18 February 2012

ಪ್ರೀತಿಯ ಕರೆ ಕೇಳಿ.... ದೀಪ ಹಚ್ಚ / Preetiya kare keli

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ ||
ನಲ್ಲ ನೀ ಬಂದಂದು, ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ ||

ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ ದೀಪ ಹಚ್ಚ ||

ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತ್ತು
ಹೊಸಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ ದೀಪ ಹಚ್ಚ ||

ವಿಶ್ವಮೋಹಿತ ಚರಣ ವಿವಿಧ ವಿಶ್ವಾಭರಣ 
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಹೇಳಲೀ ದೀಪ ಹಚ್ಚ ||

ನನ್ನಂತರಂಗದಿ ನಂದದೆ ನಿಂದಿಪ
ನಂದಾದೀಪವಾಗಿರಲೀ ದೀಪ ಹಚ್ಚ ||


                                                  - ಎಸ್. ವಿ. ಪರಮೇಶ್ವರ ಭಟ್ಟ     

No comments:

Post a Comment