ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Thursday, 22 December 2011

ಯಾವ ಹಾಡು ಹಾಡಲಿ / Yaava haadu haadali

ಯಾವ ಹಾಡು ಹಾಡಲಿ ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ?

ಸುತ್ತ ಮುತ್ತ ಮನೆ ಮಠಗಳು | ಹೊತ್ತಿಕೊಂಡು ಉರಿಯುವಲ್ಲಿ
ಸೋತು ಮೂಕವಾದ ಬದುಕು | ನಿಟ್ಟುಸಿರೊಳು ತೇಲುವಲ್ಲಿ
ಯಾವ ಹಾಡು ಹಾಡಲಿ || ೧ ||

ಬರಿ ಮಾತಿನ ಜಾಲದಲ್ಲಿ | ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ | ಹಸಿದ ಹೊಟ್ಟೆ ನೆರಳುವಲ್ಲಿ |
ಯಾವ ಹಾಡು ಹಾಡಲಿ || ೨ ||

ಉರಿವ ಕಣ್ಣ ಚಿತೆಗಳಲ್ಲಿ | ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ | ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡು ಹಾಡಲಿ || ೩ ||

ಬೆಳಕಿಲ್ಲದ ದಾರಿಯಲ್ಲಿ | ಪಾಳುಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ | ಕುರುಡ ಪಯಣ ಸಾಗುವಲ್ಲಿ
ಯಾವ ಹಾಡು ಹಾಡಲಿ || ೪ ||

                                                                           - ಜಿ. ಎಸ್. ಶಿವರುದ್ರಪ್ಪ    

No comments:

Post a Comment