ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ.
ಮುಡಿದ ಮಲ್ಲಿಗೆಯರಳು ಬಾಡಿಲ್ಲ, ರಾಯರೇ,
ತೌರಿನಲಿ ತಾಯಿ ನಗುತಿಹರು.
ಕುಡಿದ ನೀರಲುಗಿಲ್ಲ, ಕೊರಗದಿರಿ, ರಾಯರೇ,
ಅಮ್ಮನಿಗೆ ಬಳೆಯ ತೊಡಿಸಿದರು.
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು;
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬಾ ಜನವಿತ್ತು.
.
ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ,
ಹೊಳೆದಿತ್ತು ಕೊರಳಿನಲಿ ಪದಕ.
ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ
ಕಣ್ತುಂಬ ನೋಡಿದೆನು ಮುದುಕ.
ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ,
ಸೆರಗಿನಲಿ ಕಣ್ಣೀರನೊರಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ,
ದೀಪದಲಿ ಬಿಡುಗಣ್ಣ ನಿಲಿಸಿ.
ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ
ಹೊಸ ಸೀರೆ ರತ್ನದಾಭರಣ;
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ.
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು
ಕುದಿಯಬಾರದು ನನ್ನ ದೊರೆಯೆ;
ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು;
ಒಣಗಬಾರದು ಒಡಲ ಚಿಲುಮೆ.
ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು?
ನಿಮಗೆತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು.
- ಕೆ.ಎಸ್. ನರಸಿಂಹ ಸ್ವಾಮಿ
- ಕೆ.ಎಸ್. ನರಸಿಂಹ ಸ್ವಾಮಿ
This poem summary (ಸಾರಾಂಶ)
ReplyDelete