ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Friday, 7 October 2011

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ / Elenna manadanne

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ
      ಏಳು ಮಂಗಳದಾಯಿ ಉಷೆಯ ಗೆಳತಿ
ಏಳು ಮುತ್ತಿನ ಚೆಂಡೆ ಏಳು ಮಲ್ಲಿಗೆ ದಂಡೆ
      ಏಳು ಬಣ್ಣದ ಬಿಲ್ಲೆ ಮಾಟಗಾತಿ.

ಏಳೆನ್ನ ಕಲ್ಯಾಣಿ ಏಳು ಭಾವದರಾಣಿ
      ನೋಡು ಮೂಡಲದಲ್ಲಿ ರಾಗಮಿಲನ
ಮರದುದೆಯ ತೋರಣದಿ ಹೊಂಬಿಸಿಲ ಬಾವುಟವು
      ಗಾಳಿ ಬಟ್ಟೆಯಲದರ ಚಲನ ವಲನ

ಮಂಜಿನರಳೆಯ ಹಿಂಜಿ ತೂರುತಿಹ ನೇಸರನು
      ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೊಗರೇರಿಹನು ಏಳೆನ್ನ ಹೊಂಗೆಳತಿ
      ಮೊಗದ ಜವನಿಕೆ ತೆರೆದು ನಗೆಯ ನೀಡು

ಲಲಿತಶೃಂಗಾರ ರಸಪೂರ್ಣೆ ಚಂದಿರವರ್ಣೆ
      ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
      ಒಂದು ಚಣ ಜಗವನ್ನೇ ಮರೆತುಬಿಡುವೆ

                                                    - ಚನ್ನವೀರ ಕಣವಿ

2 comments:

  1. ವಸು ಅವರೇ ಇದನ್ನು ಬರೆದಿದ್ದು ಚೆನ್ನವೀರ ಕಣವಿ ಅವರು ... ಕೆ ಎಸ್ ನ ಅಲ್ಲ ...

    ReplyDelete
  2. ವಸು ಅವರೇ ಇದನ್ನು ಬರೆದಿದ್ದು ಚೆನ್ನವೀರ ಕಣವಿ ಅವರು ... ಕೆ ಎಸ್ ನ ಅಲ್ಲ

    ReplyDelete