ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..
ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು, ಸದಾ....
ತಪ್ತಕಾಮಿನಿ ನನ್ನ ಶಾಲ್ಮಲಾ..
ಭೂಗರ್ಭದ ಮೌನದಲ್ಲಿ ಧುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು, ಸದಾ....
ಸುಪ್ತಮೋಹಿನಿ ನನ್ನ ಶಾಲ್ಮಲಾ..
ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ,
ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..
- ಚಂದ್ರಶೇಖರ ಪಾಟಿಲ
ನಮ್ಮ ಅಮ್ಮನ ತುಂಬಾ ಇಷ್ಟವಾದ ಹಾಡು, ದೂರದರ್ಶನದಲ್ಲಿ ಬಂದ ಈ ದಾರವಾಹಿಯ ಹಿಮ್ಮೇಳದ ಅಶ್ವಥ್ ಹಾಡಿದ ಹಾಡು
ReplyDeleteಅಪ್‌ಲೋಡ್ ಮಾಡಿದ್ದಿಕ್ಕೆ ತುಂಬಾ ಧನ್ಯವಾದಗಳು.