ಒಂದು
೧
ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS
೨
ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾS
೩
ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ
೪
ಹತವೊ ಹಿತವೋ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ
೫
ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ.
ಎರಡು*
೧
ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡುನಡುಗಿ;
೨
ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;
೩
ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;
೪
ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;
೫
ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವುದೋ
ನಾ ತಿಳಿಯೆ.
೬
ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.
ಮೂರು
೧
'ಚಿತ್ತೀಮಳಿ, ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿSಯೊ ಮಗನS
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ'
೨
'ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.'
ನಾಕು
೧
'ನಾನು' 'ನೀನು'
'ಆನು' 'ತಾನು'
ನಾಕೆ ನಾಕು ತಂತಿ,
೨
ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.
- ಅಂಬಿಕಾತನಯದತ್ತ
(ದ.ರಾ.ಬೇಂದ್ರೆ)
(* ಮೈಸೂರು ಅನಂತಸ್ವಾಮಿ ಅವರ ರಾಗಸಂಯೋಜನೆಯಲ್ಲಿ ಮೂಡಿರುವ ಗೀತೆಯಲ್ಲಿ ಈ ಎರಡನೇ ತಂತಿ ಗಣಿಸಲ್ಪಟ್ಟಿಲ್ಲ. ಭಾವಗೀತೆಯು ಕೇವಲ ಒಂದು, ಮೂರು ಮತ್ತು ನಾಲ್ಕನೇ ತಂತಿಗಳಿ೦ದೊಡಗೂಡಿದೆ).
thank you for sharing the lyric
ReplyDeleteನಾನು ನೀನು... ಆನು ತಾನು... 😍
ReplyDeleteHai
ReplyDeleteDhanyavaadagalu sir, helped me understand parallelly as i was hearing Dr. Guruaj Karajagi's beautiful talk on Da. Ra. Bendre.
ReplyDeletehttps://www.youtube.com/watch?v=sGHiW2XRIk4
shaatanu arthagilla
ReplyDelete