ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday, 3 September 2012

ಅನಂತ ಪ್ರಣಯ (ಉತ್ತರಧ್ರುವದಿಂ, ದಕ್ಷಿಣಧ್ರುವಕೂ) / Uttara dhruvadim, dakshina dhruvaku

ಉತ್ತರಧ್ರುವದಿಂ, ದಕ್ಷಿಣಧ್ರುವಕೂ,
ಚುಂಬಕ ಗಾಳಿಯು ಬೀಸುತಿದೆ 
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು. 

ಅಕ್ಷಿನಿಮೀಲನ ಮಾಡದೆ ನಕ್ಷ- 
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

                                                      - ಅಂಬಿಕಾತನಯದತ್ತ  

No comments:

Post a Comment