ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 27 August 2011

ಪ್ರಶ್ನೆಗೆ ಉತ್ತರ / Ondirulu Kanasinali

 ರಚನೆ: ಕೆ. ಎಸ್. ನರಸಿಂಹ ಸ್ವಾಮಿ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು 
           ಚೆಂದ ನಿನಗಾವುದೆಂದು -
ನಮ್ಮೂರು ಹೊನ್ನುರೋ,  ನಿಮ್ಮೂರು ನವಿಲೂರೋ 
           ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
           ಎಂದೆನ್ನ ಕೇಳಲೇಕೆ ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು 
           ವಿಸ್ತರಿಸಿ ಹೇಳಬೇಕೇ? - 
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
           ಎಂದೆನ್ನ ಕೇಳಲೇಕೆ ? - ಎನ್ನರಸ,
           ಸುಮ್ಮನಿರಿ ಎಂದಳಾಕೆ.

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
          ಬಾಳೆಗಳು ತೋಳ ಬೀಸಿ ;
ಮಲ್ಲಿಗೆಯ ಮೊಗ್ಗುಗಳು ಮುಳ್ಳುಬೇಲಿಯ ವರಿಸಿ 
          ಬಳುಕುತಿರೆ ಕಂಪ ಸೂಸಿ ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು 
          ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು 
          ನಿಲ್ಲಿಸಿತು ಪ್ರೇಮ ಕೂಗಿ - 

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ 
          ಎಂದೆನ್ನ ಕೇಳಲೇಕೆ ? - ಎನ್ನರಸ
          ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ 
          ಓಡಿದುದು ದಾರಿ ಬೇಗ ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು -
          ನಿಮ್ಮೂರ ಸೇರಿದಾಗ.
ಊರ ಬೇಲಿಗೆ ಬಂದು, ನೀವು ನಮ್ಮನು ಕಂಡು 
          ಕುಶಲವನು ಕೇಳಿದಾಗ,
ತುಟಿಯಲೇನೋ ನಿಂದು, ಕಣ್ಣಲೇನೋ ಬಂದು
          ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
          ಎಂದೆನ್ನ ಕೇಳಲೇಕೆ ? - ಎನ್ನರಸ
          ಸುಮ್ಮನಿರಿ ಎಂದಳಾಕೆ.

3 comments:

  1. Superb sir..... Onde blog
    Li bhavageetegala collections ide....

    ReplyDelete
  2. ವಸು ರವರಿಗೆ ವಂದನೆಗಳು, ಕಾಲೇಜಿನ ಬಾವಗೀತೆ ಹಾಡುವ ಸ್ಪರ್ಧೆ ಯನ್ನ ಮಾಡಲು ಸಹಾಯವಾಯಿತು.

    ReplyDelete