ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 24 September 2011

ಬಳೆಗಾರನ ಹಾಡು / Balegaara Channayya bagilige

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು 
      ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು 
      ಬಳೆಯ ತೊಡಿಸುವುದಿಲ್ಲ ನಿಮಗೆ.
 
ಮುಡಿದ ಮಲ್ಲಿಗೆಯರಳು ಬಾಡಿಲ್ಲ, ರಾಯರೇ,
      ತೌರಿನಲಿ ತಾಯಿ ನಗುತಿಹರು.
ಕುಡಿದ ನೀರಲುಗಿಲ್ಲ, ಕೊರಗದಿರಿ, ರಾಯರೇ,
      ಅಮ್ಮನಿಗೆ ಬಳೆಯ ತೊಡಿಸಿದರು.

ಅಂದು ಮಂಗಳವಾರ ನವಿಲೂರ ಕೇರಿಯಲಿ 
      ಓಲಗದ ಸದ್ದು ತುಂಬಿತ್ತು;
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ 
      ಅಂಗಳದ ತುಂಬಾ ಜನವಿತ್ತು.
.
ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ,
      ಹೊಳೆದಿತ್ತು ಕೊರಳಿನಲಿ ಪದಕ.
ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ
      ಕಣ್ತುಂಬ ನೋಡಿದೆನು ಮುದುಕ.

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ,
      ಸೆರಗಿನಲಿ ಕಣ್ಣೀರನೊರಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ, 
      ದೀಪದಲಿ ಬಿಡುಗಣ್ಣ ನಿಲಿಸಿ.

ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ
      ಹೊಸ ಸೀರೆ ರತ್ನದಾಭರಣ;
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
      ನಿಮಗಿಲ್ಲ ಒಂದು ಹನಿ ಕರುಣ.

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು 
      ಕುದಿಯಬಾರದು ನನ್ನ ದೊರೆಯೆ;
ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು;
      ಒಣಗಬಾರದು ಒಡಲ ಚಿಲುಮೆ.

ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು?
      ನಿಮಗೆತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು 
      ಅಮ್ಮನಿಗೆ ನಿಮ್ಮದೇ ಕನಸು.

                                                         - ಕೆ.ಎಸ್. ನರಸಿಂಹ ಸ್ವಾಮಿ 

Friday, 23 September 2011

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ / Akki arisuvaaga chikka nucchina naduve

ರಚನೆ: ಕೆ. ಎಸ್. ನರಸಿಂಹ ಸ್ವಾಮಿ 

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ 
ಬಂಗಾರವಿಲ್ಲದ ಬೆರಳು.
ತಗ್ಗಿರುವ ಕೊರಳಿನ ಸುತ್ತ ಕರಿಮಣಿವೊಂದೇ 
ಸಿಂಗಾರ ಕಾಣದಾ ಹೆರಳು.

ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ 
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ 
ಹುಚ್ಚು ಹೊಳೆ ಮುಂಗಾರಿನುರುಳು.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು,
ಅತ್ತ ಯಾರೋ ಹೋದ ಇತ್ತ ಯಾರೋ ಬಂದ 
ಕಡೆಗೆಲ್ಲ ಕಣ್ಣು ಬಿತ್ತು.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು 
ಚಿತ್ರದಲಿ ತಂದಂತೆ ಇಹಳು 
ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು / Attitta nodadiru attu horalaadadiru

 ರಚನೆ : ಕೆ.ಎಸ್. ನರಸಿಂಹ ಸ್ವಾಮಿ

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು 
            ನಿದ್ದೆ ಬರುವಳು ಹೊದ್ದು ಮಲಗು, ಮಗುವೆ;
ಜೋ ಜೋಜೋ ಜೋ ಜೋ ಜೋಜೋ ಜೋ 
ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು.
            ನಿದ್ದೆ ಬರುವಳು ಕದ್ದು ಮಲಗು ಮಗುವೆ 
ಜೋ ಜೋಜೋ ಜೋ ಜೋ ಜೋಜೋ ಜೋ.

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
           ಮಲಗು ತೊಟ್ಟಿಲ ಸಿರಿಯೆ, ದೇವರಂತೆ; 
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,  
           ಮಲಗು ಚಂದಿರನೂರ ಹೋಗುವೆಯಂತೆ .

ತಾರೆಗಳ ಜರತಾರಿಯಂಗಿ ತೊಡಿಸುವರಂತೆ
           ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
          ವೀಣೆ ನುಡಿಸುವರಂತೆ ಸುತ್ತ ನೆರೆದು.   

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
          ಹಗಲು ಬರುವನು ಬೆಳ್ಳಿ ಮುಗಿಲ ನಡುವೆ 
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ 
          ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು 
          ನಿದ್ದೆ ಬರುವಳು ಹೊದ್ದು ಮಲಗು ಮಗುವೆ 
ಜೋ ಜೋಜೋ ಜೋ ಜೋ ಜೋಜೋ ಜೋ 
ಜೋ ಜೋಜೋ ಜೋ ಜೋ ಜೋಜೋ ಜೋ 

Saturday, 17 September 2011

ಮುನಿಸು ಥರವೇ ಮುಗುದೆ / Munisu Tharave mugude

ಮುನಿಸು ಥರವೇ ಮುಗುದೆ 
ಹಿತವಾಗಿ ನಗಲು ಬಾರದೆ ||

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಝುಮ್ಮೆನ್ನಲು |
ನವಭಾವ ತುಂಬಿ ತುಂಬಿ ಮನ ಹಾಡಲು 
ತೆರೆದಂತಿದೆ ಭಾಗ್ಯದ ಬಾಗಿಲು ||

ಎಷ್ಟೊಂದು ಕಾಲದಿಂದ ಹಂಬಲಿಸಿದೆ 
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ 
ಮುನಿಸೇತಕೆ ಈ ಬಗೆ ಮೂಡಿದೆ ||

ಹೊಸಬಾಳ ಬಾಗಿಲಲ್ಲಿ ನಾವೀದಿನ 
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥವಾದಂತೆ ನಮ್ಮ ಈ ಮೈಮನ 
ಜತೆಸೇರಲು ಜೀವನ ಪಾವನ ||


                                                          - ಸುಬ್ರಾಯ ಚೊಕ್ಕಾಡಿ.

ಯಾರು ಜೀವವೇ ಯಾರು ಬಂದವರು / Yaaru jeevave yaaru bandavaru

ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ 
ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ ||

ಬಾನ ನೀಲಿಯಲಿ ಕರಿಬಿಳಿ ಬಣ್ಣದ ಗಾನ ಚಿಮ್ಮಿದವರು 
ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು || ಯಾರು ||

ನಸುಕಿನ ಬೆಳಕನು ಮಂಜಿನ ತೆರೆಯಲಿ ಜಾಲಿಸಿ ಬಿಡುವವರು 
ಮಣ್ಣಿನ ಮುಖದಲಿ ಹಸಿರಿನ ಸುಂದರ ಕಣ್ಣ ಬಿಡಿಸಿದವರು || ಯಾರು ||

ಯಾರು ಜೀವವೇ ಗಳಿಗೆ ಹಿಂದೆ ನನ್ನೆದೆಯಲಿ ಮೂಡಿದರು
ಯಾರು ಎಂದು ನಾ ತಿಳಿಯುವ ಮೊದಲೇ ಕಾಣದೆ ಸರಿದವರು || ಯಾರು ||

                                                               - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

Sunday, 11 September 2011

ಬಂಗಾರ ನೀರ ಕಡಲಾಚೆಗೀಚೆಗಿದೆ / Bangaara neera kadalaachegeechegide

ರಚನೆ: ದ.ರಾ.ಬೇಂದ್ರೆ.

ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ (೨)

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ 
ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ 
ಅದು ನಮ್ಮ ಊರು ಇದು ನಿಮ್ಮ ಊರು ತಮ್ ತಮ್ಮ ಊರೋ ಧೀರ 
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ||

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ 
ಹರಿತದ ಭಾವ ಬೇರಿತದಾ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ 
ಅಂಬಿಗನು ಬಂದ ನಂಬಿಗನು ಬಂದ ಬಂದದಾ ದಿವ್ಯ ಘಳಿಗೆ ||

ಇದು ಉಪ್ಪು ನೀರ ಕಡಲಲ್ಲೋ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ ಅರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು ||
   
ಬಂದವರ ಬಳಿಗೆ ಬಂದದ ಮತ್ತು ನಿಂದವರಾ ನೆರೆಗೂ ಬಂದದೋ ಬಂದದ
ನವ ಮನು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ ||

Saturday, 10 September 2011

ಅಸೀಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ... / Aseema roopi ambaradalli

 ರಚನೆ : ಪ್ರೊ || ದೊಡ್ಡರಂಗೇಗೌಡ

ಅಸೀಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ  |
ವಸುಂಧರೆಯ ಹೂಮೈಯಲ್ಲಿ ಹೊನ್ನಾರು ಕೂಡಿದೆ |
ಮಸೆವ ಬಿಸಿಲು ಮಾಗಿರುವಲ್ಲಿ ಮಂದಹಾಸ ತುಂಬಿದೆ |
ಹಸಿದ ರೈತ ಸಂಕುಲದಲ್ಲಿ ಹೊಸ ಆಸೆ ಹಾಡಿದೆ ||

ಅಗಮ್ಯ ನೆಲೆಯ ಕಾನನದಲ್ಲಿ ಹರಿದ್ವರ್ಣ ತೂಗಿದೆ |
ಅದಮ್ಯ ಸಿರಿಯ ಸಂಭ್ರಮದಲ್ಲಿ ಜೀರುಂಡೆ ಕೂಗಿದೆ |
ವರುಣ ಬರುವ ಆವೇಶದಲ್ಲಿ ದುಂಧುಭಿ ಮೊಳಗಿದೆ |
ಹರುಷ ತರುವ ಮಾರುತನಲ್ಲಿ ಮಣ್ಣಿನ ಕಂಪಿದೆ ||

ಅನನ್ಯ ಬಗೆಯ ಬಾಂದಳದಲ್ಲೂ ಸಂತೋಷ ಹೊಮ್ಮಿದೆ |
ಅನಿತ್ಯ ಬದುಕ ಗೊಂದಲದಲ್ಲೂ ಉನ್ಮಾದ ಚಿಮ್ಮಿದೆ |
ಅಸಂಖ್ಯ ಹೊದರ ತರುಲತೆಯಲ್ಲೂ ಲಾವಣ್ಯ ನಿಂತಿದೆ |
ಅನೂಹ್ಯ ಪದರ ಕಾರ್ಮುಗಿಲಲ್ಲೂ ಹೂಮಳೆಯ ಸಂಚಿದೆ ||

ಮಹಾಪೂರ ನಿರೀಕ್ಷೆಯಲ್ಲೂ ಕಾತರವೇ ಕಾಡಿದೆ |
ಗರಿಕೆ ಚಿಗುರ ಅಂಕುರದಲ್ಲೂ ಆನಂದ ತುಂಬಿದೆ |
ಹೊಸಾನೇಗಿಲ ಮುನ್ನಡೆಯಲ್ಲೂ ಋತುಮಾನದಾ ರಂಗಿದೆ |
ನವಮಾನವ ಮುನ್ನೊಟದಲ್ಲೂ ಕಾಲಚಕ್ರ ಉರುಳಿದೆ ||

Thursday, 8 September 2011

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ / Entha hadavitte hareyake

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ 
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||

ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ 
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ೧ ||

ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ 
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ೨ ||

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||

                                                               - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

Tuesday, 6 September 2011

ತೂರಿ ಬಾ ಜಾರಿ ಬಾ ಮುಗಿಲ ಸಾರವೇ ಬಾ ಬಾ | / Toori baa Jaari baa mugila sarave ba ba

 ರಚನೆ; ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ

ತೂರಿ ಬಾ ಜಾರಿ ಬಾ ಮುಗಿಲ ಸಾರವೇ ಬಾ ಬಾ |
ಸುರಿದು ಬಾ ಹರಿದು ಬಾ ಜಲರೂಪಿ ಒಲವೇ ಬಾ ಬಾ ||

ಬಾನ ಕಡೆಗೆ ಕೈಯ ನೀಡಿ ಮುಗಿಲ ನಡೆಗೆ ಕಣ್ಣ ಹೂಡಿ 
ಬಾಯಿ ತೆರೆದು ನಿಂತ ನೆಲದ ಉರಿವ ದಾಹ ಶಮನ ಮಾಡಿ |
ಮಣ್ಣಿನ ಧಗೆ ತಣಿಸುತ ತಣ್ಣನೆ ಸುಧೆ ಉಣಿಸುತ (೨)
ದಿವದ ವರವಾಗಿ ಚೆಲ್ಲಿ ಬಾ ಭವಕೆ ನೆರವಾಗಿ ನಿಲ್ಲು ಬಾ || 

ಮಿಂಚು ಹೊಳೆಸಿ ಗುಡುಗು ನುಡಿಸಿ ಗಿರಿಮುಡಿಗೆ ಅಭಿಷೇಕ ಹರಿಸಿ 
ಗಾಳಿ ಆನೆಯ ಬೆನ್ನ ಏರಿ ಮಾಡಿ ಮೊಜಿನಾ ಸವಾರಿ |
ಬಿಸಿಲಾ ತಲೆ ಹಾರಿಸಿ ಹಸಿರ ಧ್ವಜ ಏರಿಸಿ (೨)
ನೆಲಕೆ ಉಸಿರಾಗಿ ಇಳಿದು ಬಾ ಇಳೆಯ ಬಾಳನ್ನು ತೊಳೆದು ಬಾ ||

                                                                                - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

Saturday, 3 September 2011

ಯಾವ ಮೋಹನ ಮುರಲಿ ಕರೆಯಿತೋ / Yaava mohana murali kareyito

ಯಾವ ಮೋಹನ ಮುರಲಿ ಕರೆಯಿತೋ ದೂರ ತೀರಕೆ ನಿನ್ನನು?
      ಯಾವ ಬೃಂದಾವನವು ಸೆಳೆಯಿತೋ ನಿನ್ನ ಮಣ್ಣಿನ ಕಣ್ಣನು? 

ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ;
      ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ ರಕ್ತಮಾಂಸದ ಬಿಸಿದು ಸೋಂಕಿನ ಪಂಜರ;
      ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ 
      ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಅಡಗಿದೆ ಬೇಸರ;
      ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ 

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
      ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
      ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
      ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

                                                              - ಗೋಪಾಲಕೃಷ್ಣ ಅಡಿಗ