ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Wednesday 31 October 2012

ಹಚ್ಚೇವು ಕನ್ನಡದ ದೀಪ / Hacchevu kannadada deepa

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

                                                                                     - ಡಿ. ಎಸ್. ಕರ್ಕಿ

Download this song

                          

ಮುಂಜಾನೆ ಮಂಜೆಲ್ಲ ಚಂದಾಗೈತೆ.. / Munjaane manjella chandaagaite

ಮುಂಜಾನೆ ಮಂಜೆಲ್ಲ ಚಂದಾಗೈತೆ..
ಸಂಗಾತಿ ತುಟಿ ಹಂಗೆ, ಹವಳಾದ ಮಣಿ ಹಂಗೆ ಹೊಳಪಾಗೈತೆ...

ಸಂಪಿಗೆ ತೂಗಿ ಚೆಂಡು ಹೂ ಬಾಗಿ
ನೇಸರ ನಗೆಸಾರ ಶುರುವಾಗೈತೆ
ಸೂಲಂಗಿ ತೆನೆಗೆ ಬಾಳೆಲೆ ಗೊನೆಗೆ
ತಂಗಾಳಿ ಸುಳಿದಾಡಿ ಹಾಡಾಗೈತೆ
ಕಣ್ಣಾಗಿ ಸಂಗಾತಿ ಕುಣಿದ್ಹಂಗೈತೆ
                                                          ಮುಂಜಾನೆ ಮಂಜೆಲ್ಲ....

ಮೋಡದ ದಂಡು ಓಡೋದ ಕಂಡು
ರಂಗೋಲಿ ವೈನಾಗಿ ಬರೆದ್ಹಂಗೈತೆ
ಆಕಾಶದ ಬದಿಗೆ ಗುಡ್ಡದ ತುದಿಗೆ
ಹೊಂಬಿಸಿಲು ರಂಗಾಗಿ ಬೆಳಕಾಗೈತೆ
ಮೈದುಂಬಿ ಮನಸೋತು ಮೆರೆದ್ಹಂಗೈತೆ.

                                                          ಮುಂಜಾನೆ ಮಂಜೆಲ್ಲ....

                                                                                              - ಪ್ರೊ. ದೊಡ್ಡರಂಗೇಗೌಡ

Download this song

Monday 22 October 2012

ಇರುಳ ಸಮಯ ಸುರಿಮಳೆಯೊಳಗೆ / Irula samaya surimaleyolage

ಇರುಳ ಸಮಯ ಸುರಿಮಳೆಯೊಳಗೆ
ದೋಣಿಗಳಿಳಿದಿವೆ ಹೊಳೆಯೊಳಗೆ..

ಶ್ಯಾಮಲ ಸಾಗರವೇ ಗುರಿಯೆನ್ನುತ
ಸಾಗಿವೆ ಸಾವಿರ ದೋಣಿಗಳು.
ಸೆರಗೇ ಹಾಯಿ ಹೃದಯವೇ ಹುಟ್ಟು
ದೋಣಿ ಹಿಂದೆ ಜಲವೇಣಿಗಳು.
                                                       ಇರುಳ ಸಮಯ...

ಏರಿಳಿಯುವ ಅಲೆ ಮುಂದೆ ಇದಿರು ಹೊಳೆ
ಜಗ್ಗುವುವೇ ಈ ಹಾಯಿಗಳು.
ಎದೆಯನೆ ಸೀಳುವ ಹೋಳುಬಂಡೆಗಳು
ಆ ಎನ್ನುವ ಸುಳಿಬಾಯಿಗಳು.
                                                       ಇರುಳ ಸಮಯ...

ಮುಳುಗಿಸೋವಥವಾ ತೆಲಿಸೋ ರಥವ
ಧೃತಿಯೊಂದೇ ಗತಿ ಹಾಡುತಿವೆ 
ಮುಳುಗದ ಹೊರತು ತೇಲದು ದೋಣಿ
ಹಾಯಿ ವಿದಾಯವ ಹೇಳುತಿವೆ  
                                                       ಇರುಳ ಸಮಯ...


* ಸಿ. ಅಶ್ವಥ್ ರವರ ತೂಗುಮಂಚ ಸಂಕಲನದ ಗೀತೆ. ಹೆಚ್ಚೆಸ್ವಿ ಅವರ ಸಾಹಿತ್ಯ ಎಂದು ಕೇಳಿ ಗೊತ್ತಷ್ಟೆ, ಖಾತ್ರಿಯಿಲ್ಲ.

Download this song

Monday 15 October 2012

ಶ್ರುತಿ ಮೀರಿದ ಹಾಡು / Shruthi meerida haadu

ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು
ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು
ತಳೆಯಿತೆ ಈ ನಿಲುವು 

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು

                                               - ಬಿ ಆರ್ ಲಕ್ಷ್ಮಣರಾವ್

ಅಕೋ ಶ್ಯಾಮ ಅವಳೇ ರಾಧೆ / Ako Shyaama avale radhe

ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ

ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ.

                                                           - ಪು.ತಿ.ನ

Download This song

Saturday 13 October 2012

ಉಸಿರಿಲ್ಲದ ಬಾನಿನಲ್ಲಿ / Usirillada baaninalli

ಉಸಿರಿಲ್ಲದ ಬಾನಿನಲ್ಲಿ
ನಿಶೆಯೇರಿದೆ ಬಿಸಿಲು,
ಕೆಂಡದಂತೆ ಸುಡುತಿದೆ
ನಡು ಹಗಲಿನ ನೊಸಲು.

ಒಂದೊಂದು ತೊರೆಯೂ
ಒಣಗಿ ಬಿರಿದ ಪಾತ್ರ
ಪ್ರತಿಯೊಂದೂ ಮರವೂ
ಎಳೆ ಕಳಚಿದ ಗಾತ್ರ.
ಮುಗಿಲಿಲ್ಲದ ಬಾನಿನಲ್ಲಿ
ಭುಗಿಲೆನ್ನುವ ಗಾಳಿಯಲ್ಲಿ
ಧಗಧಗಿಸಿತೊ ಎಂಬಂತಿದೆ
ಮುಕ್ಕಣ್ಣನ ನೇತ್ರ

ಬಿಸಿಲಲ್ಲೂ ಅಲೆಯುತ್ತಿವೆ
ಕೊಬ್ಬಿದ ಮರಿಗೂಳಿ
ಎಮ್ಮೆ ಹಿಂಡು ಸಾಗಿದೆ
ಮೇಲೆಬ್ಬಿಸಿ ಧೂಳಿ.
ದಾರಿ ಬದಿಯ ಬೇಲಿ
ಮಾಡುತ್ತಿದೆ ಗೇಲಿ
ನೋಡುತ್ತಿದೆ ಸಾಕ್ಷಿಯಾಗಿ
ಆಕಾಶದ ನೀಲಿ.

                                                 - ಬಿ. ಆರ್. ಲಕ್ಷ್ಮಣ ರಾವ್ 

ಹೊಸ ವರ್ಷ ಬಂದಂತೆ ಯಾರು ಬಂದಾರು / Hosa varsha bandante yaaru bandaaru

ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು.

ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ.

ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ .

ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ .


                                                                            - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ