ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 30 December 2013

ಒಡೆದು ಬಿದ್ದ ಕೊಳಲು ನಾನು.. / Odedu bidda Kolalu naanu

ಒಡೆದು ಬಿದ್ದ ಕೊಳಲು ನಾನು,
ನಾದ ಬರದು ನನ್ನಲಿ;
ವಿನೋದವಿರದು ನನ್ನಲಿ.

ಕಿವಿಯನೇಕೆ ತೆರೆಯುತಿರುವೆ?
ಎದೆಯೊಳೇನ ಬಯಸುತಿರುವೆ?
ದೊರೆಯದೇನೂ ನನ್ನಲಿ!
                       
ನಲ್ಲೆ ಬಂದು ತುಟಿಗೆ ಕೊಳಲ
ನೊತ್ತಿ ಉಸುರ ಬಿಟ್ಟಳು;
ತನ್ನ ಒಲವಿನಿಂದ್ರಧನುವ
ಹರಿದು ಇಳಿದು ಬಿಟ್ಟಳು;
ಬಣ್ಣ ಬಣ್ಣದೆನಿತೋ ಹಾಡ
ನಿಲ್ಲಿ ಚೆಲ್ಲಿ ಕೊಟ್ಟಳು.


ಹಾಡಿ ಹಾಡಿ ಬೇಸರಾಗಿ
ನೆಲಕೆಸೆದಳು ಕೊಳಲನು;
ಇಂದು ಮೌನದುಸುಬಿನಲ್ಲಿ
ಹುಗಿದಳೆನ್ನ ಮನವನು.


       ಕೊಳಲು ಬೇಸರಾಯಿತೇನೊ,
       ಹೊಸ ಹಂಬಲ ಹಾಯಿತೇನೊ,
       ಎದೆಯ ಗಾಯ ಮಾಯಿತೇನೊ,
       ಬಿಸುಟೆದ್ದಳು ಕೊಳಲನು.

ಕಂಪು ಗಾಳಿ ಅಲೆ ಅಲೆ
ತೇಲಿ ಬರಲು ಮಲೆ ಮಲೆ
ಬಿದಿರ ಕೊಳಲ ಮಾಡಿ ಹಾಡಿ
ತೂಗುತಿರಲು ಹೊಂದಲೆ

ಒಡೆದ ಕೊಳಲ ಪಾಡ ನೋಡು;
ಇನ್ನೆಲ್ಲಿದೆ ಸುಗ್ಗಿ ಎಂದು
ಮಣ್ಣಿನಂತೆ ಮಲಗಿತು.
ಮುಗ್ಗಿ ಮುರುಟಿ ನಲುಗಿತು.

ಮನ ಯಮುನಾ ತೀರದಲ್ಲಿ
       ಕುಣಿದು ಬರೆ ಸಮೀರನು,
ನೆಳಲಿನಿಂದಲೆದ್ದು ಬರಲು
       ಗೋಪ ಗೋಪಿಕೆಯರು,
ಒಡೆದು ಬಿದ್ದ ಕೊಳಲ ಕೊಳಲು
       ಬರುವನೊಬ್ಬ ಧೀರನು,
       ಅಲ್ಲಿವರೆಗೆ ಮೃಣ್ಮಯ,
       ಬಳಿಕ ನಾನು ಚಿನ್ಮಯ!

                                                                - ಎಮ್. ಗೋಪಾಲ ಕೃಷ್ಣ ಅಡಿಗ

ಇದು ಅಡಿಗರು ಬರೆದ ಕವನದ ಪೂರ್ಣಪಾಠ. - ವಸು

Friday 6 December 2013

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene

ಯಾಕೋ ಕಾಣೆ ರುದ್ರ ವೀಣೆ
ಮಿಡಿಯುತಿರುವುದು
ಜೀವದಾಣೆಯಂತೆ ತಾನೆ
ನುಡಿಯುತಿರುವುದು.

ತಂತಿ ಮಿಂಚಿ ನಡುಗುತಿದೆ
ಸೊಲ್ಲು ಸಿಡಿದು ಗುಡುಗುತಿದೆ
ಮಿಡಿದ ಬೆರಳು ಅಡಗುತಿದೆ
ಮುಗಿಲ ಬಯಲಲಿ.

ಚಿಕ್ಕೆ ಬಾಲ ಬೀಸುತಿವೆ
ಸೂರ್ಯಚಂದ್ರ ಈಸುತಿವೆ
ಹೊಸ ಬೆಳಕನೆ ಹಾಸುತಿವೆ
ಕಾಲ ಪಥದಲಿ.

ಧರ್ಮಾಸನ ಹೊರಳುತಿವೆ
ಸಿಂಹಾಸನ ಉರುಳುತಿವೆ
ಜಾತಿ ಪಂಥ ತೆರಳುತಿವೆ
ಮನದ ಮರೆಯಲಿ.

ನೆಲದ ಬಸಿರೊಳುರಿಯುತಿದೆ
ಬೆಟ್ಟದೆದೆಯು ಬಿರಿಯುತಿದೆ
ನೀರು ಮೀರಿ ಹರಿಯುತಿದೆ
ಕೆಂಪು ನೆಲದಲಿ.

                                       -ಅಂಬಿಕಾತನಯ ದತ್ತ

Saturday 9 November 2013

ಯಾವ ರಾಗಕೊ ಏನೊ / yaava raagako eno

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

                                                        – ಜಿ. ಎಸ್. ಶಿವರುದ್ರಪ್ಪ

Download this song

Thursday 24 October 2013

ನಿನ್ನ ಕಂಗಳ ಕೊಳದಿ / Ninna Kangala Koladi

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು?
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು.

ಎದೆಗೆ ತಾಪದ ಉಸಿರು
ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ
ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು.

ನಾನೊಂದು ದಡದಲ್ಲಿ
ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು

                                        - ಎಮ್. ಎನ್. ವ್ಯಾಸ ರಾವ್

Download This Song

Wednesday 18 September 2013

ಭೂಮಿತಾಯಿಯ ಚೊಚ್ಚಿಲ ಮಗ / bhoomitaayiya chocchila maga

ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?

ಮುಗಿಲೆಂಬುವದು
ಕಿಸಿದಿತು ಹಲ್ಲು!
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು!
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು!
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು!
ಎದೆಯ ಗೂಡಿನೊಳು
ಚಿಂತೆಯ ಗೂಗಿ!
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ!
ಮೋರೆಯು ಸಾವನು
ಅಣಕಿಸುತಿಹುದು!
ಕೊರಳಿಗೆ ಹತ್ತಿದೆ
ಸಾಲದ ಶೂಲ!
ಆದರು ಬರದೊ
ಯಮನಿಗೆ ಕರುಣ 
ಉಸಿರಿಗೆ ಒಮ್ಮೆ
ಜನನಾ ಮರಣಾ.

ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು!
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೋ ಬಂದು!
ಸಾವಿನ ಬೆಳಕದು
ಕಾಣುವದೆಂದು?
ಎಂದೋ ಎಂದು
ಕನವರಿಸುವದು
ತಳಮಳಿಸುವದು!

                                 - ಅಂಬಿಕಾತನಯ ದತ್ತ

*ಬೇಂದ್ರೆಯವರ "ನಾದಲೀಲೆ" ಕವನ ಸಂಕಲನದ ಕವನ. ಕವಿತೆಯದೇ ಹೆಸರಿನಲ್ಲಿ ಮೂಡಿಬಂದ ಚಲನಚಿತ್ರದಲ್ಲಿ ಬಳಕೆಯಾಗಿದೆ.  ಗೀತೆ ನನ್ನ ಬಳಿ ಇಲ್ಲ. ಇದ್ದವರು ಕಳುಹಿಸಿದರೆ ಇಲ್ಲಿ ಜೋಡಿಸುವೆ - ವಸು

Saturday 8 June 2013

ಬಡವನಾದರೆ ಏನು ಪ್ರಿಯೆ / Badavanaadare Enu Priye

ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ

ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ
ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ

ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ
ರೆಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ

ಬೆವರು ಹರಿಸಿ ಹೂವ ಬೆಳೆಸಿ ಮುಡಿಯಲಿಟ್ಟು ನಗಿಸುವೆ
ಭುಜಕೆ ಭುಜವ ಹಚ್ಚಿ ನಿಂತು ತೋಳುಬಂಧಿ ತೊಡಿಸುವೆ

ಹರಿವ ನದಿಗೆ ಅಡ್ಡ ನಿಂತು ನಿನಗೆ ದಾರಿ ಮಾಡುವೆ
ಬಿಸಿಲು ಮಳೆಯ ಚಳಿಯ ನುಂಗಿ ನೆರಳು ಬೆಳಕು ಆಗುವೆ


* ರಚನೆ ಯಾರದ್ದೆಂದು ತಿಳಿದಿಲ್ಲ, ತಿಳಿಸಿದರೆ ತಿದ್ದುವೆ.


Download This Song

Thursday 25 April 2013

ಮೆರೆಯಬೇಡವೋ ಮನುಜ / Mereyabedavo Manuja

ಮೆರೆಯಬೇಡವೋ ಮನುಜ....
ಅಂತರಾಳದ ಅಂಕೆ ಮೀರಿ,
ಕೊಂಕು ಬೀರಿದೆ ಸುಂಕ ಕಾದಿದೆ...

ನೀತಿ ಮೀರದೆ, ನೀನು ಭ್ರಾಂತಿ ಕಾಣದೆ,
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ.
ಡಂಭಾಚಾರವು ಏಕೋ ಏಕೋ?
ತುಂಬಾ ತೋರಿಕೆ ಏಕೋ ಏಕೋ?
ಸಹಜವಾಗಿ ಬಾಳಿ ಬದುಕಯ್ಯ...
                                                         ಮೆರೆಯಬೇಡವೋ ಮನುಜ....

ಡೌಲು ತೋರದೆ, ಎಂದು ಕೇಡು ಹೊಂಚದೆ,
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ.
ಪೊಳ್ಳು ಜಂಭವು ಸಾಕೋ ಸಾಕೊ
ಸುಳ್ಳು ವಂಚನೆ ಸಾಕೋ ಸಾಕೊ
ಸ್ನೇಹದಿಂದ ಲೋಕ ನೋಡಯ್ಯ...
                                                         ಮೆರೆಯಬೇಡವೋ ಮನುಜ....


                                                                                        - ಪ್ರೊ. ದೊಡ್ಡರಂಗೇಗೌಡ

Download This Song




Thursday 18 April 2013

ಸಂಜೆಯಾಗುತಿದೆ.... / Sanjeyaagutide

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ... 
ತಾಳೆಯ ಮರಗಳು ತಲೆಯ ತೂಗುತಿವೆ ಕೆದರುತ ಇರುಳ ಜಡೆ 
ಅಂಜಿಕೆಯಾಗುವ ಮುನ್ನವೇ ಸಾಗುವ ಬೃಂದಾವನದ ಕಡೆ... 

ದಟ್ಟಡವಿಯಲಿ ಪುಟ್ಟ ಪಾಲಕರೋ! ಕತ್ತಲು ಕವಿಯುತಿದೆ 
ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ ಕಪ್ಪನು ಬಳಿಯುತಿದೆ 
ಕೃಷ್ಣ ಕಪಿಲೆಯರು ಕಾಣುವುದಿಲ್ಲ ಅಂಜಿಕೆ ಬೆಳೆಯುತಿದೆ 
ಅಂಜದಿರೆನುವನು ನಂದಕುಮಾರ ಮುರುಳಿಯ ತುಟಿಗಿಡುತ 
ಅಭಯನಾದವನು ಬಯಲಲಿ ತುಂಬಿದ ಕೊಳಲಲುಸಿರು ಬಿಡುತ 
ಇರುಳ ಬಾನಿನಲಿ ತೇಲುತ ಬಂತು ಹುಣ್ಣಿಮೆ ಬೆಳ್ಳಿ ರಥ.. 

ಎಲ್ಲಿ ನೋಡಿದರು ಬೆಳದಿಂಗಳ ಮಳೆ ಮಿದುವಾಯಿತು ನೆಲವು 
ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ ಕೋ ಎನ್ನುತ ಕೊಳವು 
ಬೆಣ್ಣೆಯ ಮೆತ್ತಿದ ತುಟಿಯನ್ನೋರೆಸುತಿದೆ ಆ ಯಮುನಾ ಜಲವು 
ಗೋಪ ಪಾಲಕರು ಕುಣಿಯುತಲಿಹರು ಕೊಳಲುಲಿ ಕೇಳುತ್ತಾ 
ಮರತ ಸಾಲುಗಳ ಒರತೆಯ ಬಗೆದು ಗೀತವ ಬಳುಕುತ್ತಾ*
ಹಸುಗಳ ಕೊರಳಿನ ಗಂಟೆಯಲೊದಿಸಿ ನಾದಕೆ ಸಿಲುಕುತ.... 
                                                              ತಾರಾ ಲೋಕವ ನಿಲುಕುತ್ತಾ... 


* ಹಾಡನ್ನು ಕೇಳಿ ಬರೆದುಕೊಂಡಿರುವುದು, ಈ ಒಂದು ಪದದ ಬಗೆಗೆ ಅನುಮಾನವಿದೆ

Friday 15 March 2013

ಹೂಬಳ್ಳಿಯ ಹಿಗ್ಗೆ / Hooballiya Higge

ಹೂಬಳ್ಳಿಯ ಹಿಗ್ಗೆ ಆನಂದದ ಬುಗ್ಗೆ
ಅರೆ ಅರಳಿದ ಮೊಗ್ಗೆ ಮಲಗು ಮಲಗು..
ಹೂವಾಡತಿ ಬರುತಾಳೆ ಬಂದರೆತ್ತಿ ಒಯ್ಯುತಾಳೆ
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ಮಮಕಾರದ ಮುತ್ತೆ, ಬೆಳದಿಂಗಳ ನತ್ತೆ
ಸ್ವಾತಿಯ ಮಣಿ ಮುತ್ತೇ ಮಲಗು ಮಲಗು.
ಮುತ್ತುಗಾರ ಬರುತಾನೆ ಬಂದರೆತ್ತಿ ಒಯ್ಯುತಾನೆ.
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ಥಳಥಳಿಸುತ ಕಣ್ಣ ಅಳುವುದು ಏಕಣ್ಣ
ನನ್ನೊಲವಿನ ಚಿನ್ನ ಮಲಗು ಮಲಗು
ಚಿನ್ನಗಾರ ಬರುತಾನೆ ಬಂದರೆತ್ತಿ ಒಯ್ಯುತಾನೆ
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ನನ್ನ ಇರುಳ ಕನಸೇ, ನಾಳೆಯ ಹೂ ಮನಸೇ
ನನ್ನ ಮೇಲೆ ಮುನಿಸೇ? ಮಲಗು ಮಲಗು
ಗಾಳಿಗುಮ್ಮ ಬರುತಾನೆ ಬಂದರೆತ್ತಿ ಒಯ್ಯುತಾನೆ.
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ನನ್ನ ಕೊರಳ ಸರವೇ, ಹಠವು ನಿನಗೆ ಥರವೇ?
ಬಣ್ಣಗನಸ ಕರೆವೆ, ಮಲಗು ಮಲಗು
ಕನಸುಗಾತಿ ಬರುತಾಳೆ ರಾಶಿ ಹೂವ ತರುತಾಳೆ.
ಮಲಗು ಮಲಗು.
                                                               ಹೂಬಳ್ಳಿಯ ಹಿಗ್ಗೆ...


* ಅಶ್ವಥರ ತೂಗುಮಂಚ ಸಂಕಲನದ  ಗೀತೆ. ಸಾಹಿತ್ಯ ಹೆಚ್ಚೆಸ್ವಿ ಅವರದ್ದೆಂದು ಕೇಳಿ ಗೊತ್ತಷ್ಟೆ. ಖಾತ್ರಿಯಿಲ್ಲ. - ವಸು.

Download this song


Saturday 2 March 2013

ಬಾ ಫಾಲ್ಗುಣ ರವಿ ದರ್ಶನಕೆ / Baa Phalguna Ravi Darshanake

ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು || ಬಾ ||

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೇಕೋ ಸ್ಪಂದಿಸುತಿದೆ ಭಾವಜ್ವಾಲೆ || ಬಾ ||

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನ ಬೋಧನ ಅನುಭವರಸ ತಾನಹುದಲ್ಲಿ || ಬಾ ||


                                                                                            - ಕುವೆಂಪು 

Download This Song

Sunday 24 February 2013

ಪಾತರಗಿತ್ತೀ ಪಕ್ಕಾ / paataragitti pakka

ಪಾತರಗಿತ್ತೀ ಪಕ್ಕಾ
ನೋಡೀದೇನS  ಅಕ್ಕಾ!  ॥ ಪ ॥


ಹಸಿರು ಹಚ್ಚಿ ಚುಚ್ಚಿ
ಮೇಲSಕರಿಸಿಣ ಹಚ್ಚಿ,

ಹೊನ್ನ ಚಿಕ್ಕಿ ಚಿಕ್ಕಿ
ಇಟ್ಟು ಬೆಳ್ಳೀ ಅಕ್ಕಿ,

ಸುತ್ತೂ ಕುಂಕುಮದೆಳಿ
ಎಳೆದು ಕಾಡಿಗೆ ಸುಳಿ,

ಗಾಳೀ ಕೆನೀಲೇನS
ಮಾಡಿದ್ದಾರ ತಾನ!
೫  
ನೂರು ಆರು ಪಾರು
ಯಾರು ಮಾಡಿದ್ದಾರು!

ಏನು ಬಣ್ಣ ಬಣ್ಣ
ನಡುವೆ ನವಿಲಗಣ್ಣ!

ರೇಶಿಮೆ ಪಕ್ಕ ನಯ
ಮುಟ್ಟಲಾರೆ ಭಯ!

ಹೂವಿನ ಪಕಳಿಗಿಂತ
ತಿಳಿವು ತಿಳಿವು ಅಂತ?

ಹೂವಿಗೆ ಹೋಗಿ ತಾವ
ಗಲ್ಲಾ ತಿವಿತಾವ,
೧೦
ಬನ ಬನದಾಗ ಆಡಿ
ಪಕ್ಕಾ ಹುಡಿ ಹುಡಿ;
೧೧
ಹುಲ್ಲುಗಾವುಲದಾಗ
ಹಳ್ಳೀಹುಡುಗೀ ಹಾಂಗ -
೧೨
ಹುಡದೀ ಹುಡದೀ ಭಾಳ
ಆಟಕ್ಕಿಲ್ಲ ತಾಳ.
೧೩
ಕಿರೇ ಸೂರೇ ಪಾನ.
ದಲ್ಲಿ ಧೂಳಿಸ್ನಾನ.
೧೪
ತುರುಬಿ ತುಂಬಿ ತೋಟ -
ದಲ್ಲಿ ದಿನದ ಊಟ.
೧೫
ಕಳ್ಳಿ ಹೂವ ಕಡಿದು
ಹೂತುಟಿನೀರ ಕುಡಿದು;
೧೬
ನಾಯಿ ಛತ್ತರಿಗ್ಯಾಗ
ಕೂತು ಮೊಜಿನ್ಯಾಗ,
೧೭
ರುದ್ರಗಂಟಿ ಮೂಸಿ
ವಿಷ್ಣುಗಂಟಿ ಹಾಸಿ,
೧೮
ಹೇಸಿಗೆ ಹೂವ ಬಳಿಗೆ
ಹೋಗಿ ಒಂದSಗಳಿಗೆ,
೧೯
ಮದಗುಣಿಕಿಯ ಮದ್ದು 
ಹುರುಪಿಗಿಷ್ಟು ಮೆದ್ದು,
೨೦
ಕಾಡ ಗಿಡ ಗಂಟಿ
ಅಂಚಿಗಂಟಿ ಗಿಂಟಿ,
೨೧ 
ಸೀಗಿಬಳ್ಳಿ ತಾಗಿ 
ಪಕ್ಕಾ ಬೆಳ್ಳಗಾಗಿ,
೨೨  
ಗೊರಟಿಗೆಗೆ ಶರಣ 
ಮಾಡಿ ದೂರಿಂದS 
೨೩
ಮಾಲಿಂಗನ ಬಳ್ಳಿ 
ತೂಗೂ ಮಂಚದಲ್ಲಿ,
೨೪  
ತೂಗಿ ತೂಗಿ ತೂಗಿ 
ದಣಿದ್ಹಾಂಗ ಆಗಿ,
೨೫ 
ಬೇಲೀ ಬಳ್ಳಿಯೊಳಗ 
ಅದರ ನೆರಳ ತೆಳಗ 
೨೬ 
ನಿದ್ದಿಗುಳ್ಯಾಡಿ 
ಪಗಡಿ ಪಕ್ಕಾ ಆಡಿ,
೨೭  
ಗುಲಬಾಕ್ಷಿಯ ಹೂವ 
ಕುಶಲ ಕೇಳತಾವ;
೨೮ 
ಹುಡಿಯ ನೀರಿನ್ಯಾಗ 
ತುಳಕಿಸುತ್ತ ಬ್ಯಾಗ 
೨೯ 
ಹಡಿಯೆ ಬೀಜ ಗಂಡು 
ಹಾರಹರಿಕಿ ಅಂದು,
೩೦  
ಅಡವಿ ಮಲ್ಲಿಗಿ ಕಂಡು 
ಅದರ ಕಂಪನುಂಡು,
೩೧  
ಹುಲ್ಲ ಹೊಲಕ ಬಂದು 
ಗುಬ್ಬಿ ಬೆಳಸಿ ತಿಂದು,
೩೨ 
ಇಷ್ಟು ಎಲ್ಲಾ ಮಾಡಿ 
ಸಪ್ಪಳಿಲ್ಲದಾಡಿ,
೩೩ 
ತಾಳ ಚವ್ವ ಚಕ್ಕ 
ಕುಣಿತ ತಕ್ಕ ತಕ್ಕ;
೩೪ 
ಆಸಿ ಹಚ್ಚಿ ಹ್ಯಾಂಗ 
ಕಂಡು ಸಿಕ್ಕಧಾಂಗ 
೩೫ 
ಸಿಕ್ಕಲ್ಲೋಡತಾವ
ಅಲ್ಯೂ ಇಲ್ಯೂ ಅವS
೩೬ 
ಕಾಣದೆಲ್ಲೋ ಮೂಡಿ 
ಬಂದು ಗಾಳಿ ಗೂಡಿ,
೩೭ 
ಇನ್ನು ಎಲ್ಲಿಗೋಟ?
ನಂದನದ ತೋಟ!


                                                  - ಅಂಬಿಕಾತನಯದತ್ತ 

* ಇದು ಮೂಲ ಕವನದ ಪೂರ್ಣಪಾಠ. ಆಯ್ದ ಕೆಲವೇ ಕೆಲವು ಚರಣಗಳನ್ನು ಭಾವಗೀತೆಯಲ್ಲಿ ಬಳಸಿಕೊಳ್ಳಲಾಗಿದೆ. ಗೀತೆ ಸಿಕ್ಕೊಡನೆ ಹಂಚಿಕೊಳ್ಳುತ್ತೇನೆ - ವಸು.  



Thursday 10 January 2013

ಕಾಡ ಹಕ್ಕಿಗಳೆ ನಿಮ್ಮ ಚಿಲಿಪಿಲಿಯು / Kaada hakkigale nimma chilipiliyu

ಕಾಡ ಹಕ್ಕಿಗಳೆ ನಿಮ್ಮ ಚಿಲಿಪಿಲಿಯು ಮೇಳವಾಯ್ತು ಧರೆಗೆ.
ಹೀಗೆ ಹಾಡುತಿರಿ ಹಾಡಿ ಹರಸುತಿರಿ ಮಂಗಳವಾಗಲಿ ತಾಯಿಗೆ.

ಬಣ್ಣದ ಹೂಗಳೆ ನಿಮ್ಮ ಚೆಲುವಿಂದ ಸೊಬಗು ಬಂತು ಬುವಿಗೆ.
ಹೀಗೆ ಮೂಡುತಿರಿ ಮೂಡಿ ಬೆಳಗುತಿರಿ ಸೌಂದರ್ಯ ಕೂಡಲಿ ಇಳೆಗೆ.

* ಸಾಹಿತ್ಯ ಯಾರದೆಂದು ತಿಳಿದಿಲ್ಲ, ಕವಿತೆಯ ಪೂರ್ಣ ಪಾಠವೂ ಸಿಕ್ಕಿಲ್ಲ. ತಿಳಿಸಿದರೆ ತಿದ್ದುವೆ.

Download This song