ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Thursday, 31 May 2012

ಅಂತರತಮ ನೀ ಗುರು.. / Antaratama nee guru

ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ ||

ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ ||

ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ ||

ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ ||

                                                     - ಕುವೆಂಪು

Friday, 25 May 2012

ಬಂದೇ ಬರತಾವ ಕಾಲ... / Bande barataava kaala

ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂಥ ಮನಸನು
ಒಂದು ಮಾಡುವ ಸ್ನೇಹಜಾಲ
                              - ಬಂದೇ ಬರತಾವ ಕಾಲ

ಮಾಗಿಯ ಎದೆ ತೂರಿ
ಕೂಗಿತೊ ಕೋಗಿಲ,
ರಾಗದ ಚಂದಕೆ
ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
                             - ಬಂದೇ ಬರತಾವ ಕಾಲ

ಹುಣ್ಣಿಮೆ ಬಾನಿಂದ
ತಣ್ಣನೆ ಸವಿಹಾಲು
ಚೆಲ್ಲಿದೆ ಮೆಲ್ಲನೆ
ತೊಯಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಬುವಿ ಬಾನು ಸೇರಿ ಹರಸ್ಯಾವ ಬಾಳನು
                            - ಬಂದೇ ಬರತಾವ ಕಾಲ

                                                           - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ 

Tuesday, 22 May 2012

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? / Amma emba maatiginta bere mantra

ಅಮ್ಮ ಎಂಬ ಮಾತಿಗಿಂತ 
ಬೇರೆ ಮಂತ್ರ ಎಲ್ಲಿದೆ ?
ಅದು ನೀಡುವ ಶಾಂತಿ ಕಾಂತಿ 
ಯಾವ ತಾರೆ ರವಿಗಿದೆ ?

ಹಾಲು ಕುಡಿಸಿ ಹೃದಯ ಬಿಡಿಸಿ 
ಪ್ರೀತಿ ಉಣಿಸಿ ಮನಸಿಗೆ 
ಬಾಳ ತೇದು ಮಕ್ಕಳಿಗೆ 
ಬೆರೆದಳಲ್ಲ ಕನಸಿಗೆ !

ಗಾಳಿಯಲ್ಲಿ ನೀರಿನಲ್ಲಿ 
ಮಣ್ಣು ಹೂವು ಹಸಿರಲಿ 
ಕಾಣದೇನು ಕಾಯ್ವ ಬಿಂಬ 
ಆಡುತಿರುವ ಉಸಿರಲಿ ?

ಮರೆವೆ ಹೇಗೆ ಹೇಳೆ ತಾಯೆ 
ನಿನ್ನೀ ವಾತ್ಸಲ್ಯವ ?
ಅರಿವೆ ಹೇಗೆ ಹೇಳೆ ತಾಯೆ 
ನಿನ್ನ ಪ್ರೀತಿ ಎಲ್ಲೆಯ ?

                                  - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ 

Saturday, 19 May 2012

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ .. / Yaake heege beesuttirabeku gaali

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ 
ಯಾಕೆ ಕಡಲು ದಡ ಮೀರದೆ ನಿಂತಿದೆ ತಾಳಿ;
ನೆಲಕೆ ಯಾಕೆ ಮಳೆ ಹೂಡಲೆ ಬೇಕು ದಾಳಿ
ನಗುವ ಯಾಕೆ ಯಮ ಜೀವಗಳೆಲ್ಲವ ಹೂಳಿ?

ಹೇಗೆ ಚಿಗುರುವುದು ಬೋಳು ಗಿಡದಿಂದ ಹಸಿರು 
ಹೇಗೆ ಸೇರುವುದು ದೇಹ ದೇಹದಲಿ ಉಸಿರು;
ಯಾವುದು ಈ ವಿಶ್ವವನೆ ಪೊರೆಯುವ ಬಸಿರು
ಚುಕ್ಕಿ ಸಾಲಿನಲಿ ಹೊಳೆಯುವುದದಾರ ಹೆಸರು?

ಯಾರು ಕರೆಸುವರು ತಪ್ಪದೆ ಪ್ರತಿದಿನ ಸೂರ್ಯನ 
ಯಾರು ಕಳಿಸುವರು ಬಾನಿಗೆ ಹುಣ್ಣಿಮೆ ಚಂದ್ರನ;
ಫಳ ಫಳ ಹೊಳೆಯುವ ತಾರೆಗೆ ಯಾರೋ ಕಾರಣ 
ಬುಗುರಿ ಆಡಿಸುವರಾರೋ ಭೂಮಿಯ ದಿನ ದಿನ ?

ಅದನು ಕಾಣುವ ಆಸೆಯು ಕಾಡಲಿ ಕಣ್ಣನು 
ಅದನೆ ಕೇಳುವ ಆಸೆಯು ಕವಿಯಲಿ ಕಿವಿಯನು 
ಅದನು ಅರಿಯುವ ಬಯಕೆಯು ಬರೆಸಲಿ ಹಾಡನು 
ಅದರೊಳು ಬೆರೆಯುವ ಹುಚ್ಚಿಗೆ ತಿನಿಸುವೆ ಬಾಳನು 

                                                                      - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

http://f.cl.ly/items/1I1I0j1T3H15463l0K45/yaake%20heege%20beesuttirabeku%20gaali.mp3

Thursday, 17 May 2012

ಕರುಣಾಳು ಬಾ ಬೆಳಕೆ .. / Karunaalu baa belake

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

                                                      - ಬಿ.ಎಂ. ಶ್ರೀಕಂಠಯ್ಯ


The Original by John Henry Newman (1801-90), composed in 1833

Lead, kindly Light, amid the encircling gloom
Lead thou me on;
The night is dark, and I am far from home,
Lead thou me on.
Keep thou my feet; I do not ask to see
The distant scene; one step enough for me.
I was not for ever thus, nor prayed that thou
Shouldst lead me on;
I loved to choose and see my path; but now
Lead thou me on,
I loved the garish day, and, spite of fears,
Pride ruled my will: remember not past years.
So long thy power hath blessed me, sure it still
Will lead me on,
O'er moor and fen, o'er crag and torrent, till
The night is gone;
And with the morn those angel faces smile,
Which I have loved long since, and lost awhile.

Saturday, 12 May 2012

ಎಲೆಗಳು ನೂರಾರು... / Elegalu nooraaru

ಎಲೆಗಳು ನೂರಾರು ಭಾವದ ಎಳೆಗಳು ನೂರಾರು 
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ, ಭಾಷೆ, ಪಂಥ ಹಲವು 
ಅವುಗಳ ಹಿಂದೆ ಮಾತ್ರ ಒಂದೇ ಒಲವು 
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ 
ನೀಗೋಣ ಭಿನ್ನತೆ ನೀಗೋಣ 
ಸಾವಿರ ಹೆಜ್ಜೆ ಒಂದೇ ಗುರಿಗಾಗಿ ||

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು 
ಬೆಳಕಿನ ಪರಿಗೆ ಒಂದೇ ಹೆಸರು 
ಸೂರ್ಯ, ಚಂದ್ರ, ಲಾಂದ್ರ, ಹಣತೆ,
ಅವುಗಳ ಹಿಂದೆ ಮಾತ್ರ ಒಂದೇ ಘನತೆ 
ತೆರೆಯೋಣ ಹೃದಯ ತೆರೆಯೋಣ 
ನಾವು ನೀವು ಸೇರಿ ಒಂದಾಗಿ 
ಮರೆಯೋಣ ಭೇದ ಮರೆಯೋಣ 
ನದಿಗಳು ಕೂಡಿದ ಪ್ರೀತಿಯ ಕಡಲಾಗಿ ||

ಪದಗಳು ನೂರಾರು ಬದುಕಿನ ಹದಗಳು ನೂರಾರು 
ಪದಗಳ ಹಿಂದೆ ಒಂದೇ ಉಸಿರು 
ಅಕ್ಕರೆಯಿಂದ ಒಟ್ಟಿಗೆ ಬಾಳೋಣ 
ಭಾರತ ಮಾತೆಗೆ ನಮ್ಮ ಪ್ರೀತಿಯ ತೋರೋಣ 
ಕಟ್ಟೋಣ ನಾಡನು ಕಟ್ಟೋಣ 
ನಾವು ನೀವು ಸೇರಿ ಒಂದಾಗಿ 
ಮುಟ್ಟೋಣ ಬಾನನು* ಮುಟ್ಟೋಣ
ತಾರೆಗಳೇ ಈ ನಾಡಿನ ಸೂರಾಗಿ ||

                                                            - ಹೆಚ್. ಎಸ್. ವೆಂಕಟೇಶ ಮೂರ್ತಿ

* ಒಂದು ಕಡೆ ಈ ಸಾಲು "ಮಾಡನು ಮುಟ್ಟೋಣ" ಎಂಬಂತಿದೆ, ರತ್ನಮಾಲ ಪ್ರಕಾಶ್ ತಂಡ  ಹಾಡಿರುವ ಹಾಡಿನಲ್ಲಿ ಬಾನನು ಮುಟ್ಟೋಣ ಎಂದಿದೆ. ಸರಿಯಾದ ಪದ ತಿಳಿದವರು ಹೇಳಿದರೆ ಸೇರಿಸುವೆ.

Thanks to Abhijnaa for requesting this wonderful song.