ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Showing posts with label H.S. Venkatesha Murthy. Show all posts
Showing posts with label H.S. Venkatesha Murthy. Show all posts

Wednesday, 21 March 2012

ಪ್ರೀತಿ ಕೊಟ್ಟ ರಾಧೆಗೆ... ಮಾತು ಕೊಟ್ಟ ಮಾಧವ / Preeti kotta raadhege maatu kotta maadhava

ಪ್ರೀತಿ ಕೊಟ್ಟ ರಾಧೆಗೆ
ಮಾತು ಕೊಟ್ಟ ಮಾಧವ |
ತನ್ನನಿತ್ತ ಕೊಳಲಿಗೆ
ರಾಗ ತೆತ್ತ ಮಾಧವ ||

ಗಂಧ ಕೊಟ್ಟ ಹೆಣ್ಣಿಗೆ
ಅಂದ ಕೊಟ್ಟ ಮಾಧವ |
ಅನ್ನ ಕೊಟ್ಟ ಭಕ್ತಗೆ
ಹೊನ್ನ ಕೊಟ್ಟ ಮಾಧವ ||

ಹಾಲು ಕೊಟ್ಟ ವಿಧುರಗೆ
ಬಾಳು ಕೊಟ್ಟ ಮಾಧವ |
ದೇಹ ಕೊಟ್ಟ ಮಣ್ಣಿಗೆ
ಜೀವ ಕೊಟ್ಟ ಮಾಧವ ||  

                                                - ಹೆಚ್. ಎಸ್. ವೆಂಕಟೇಶ ಮೂರ್ತಿ 

Tuesday, 13 December 2011

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / Amma nanu devaraane benne kaddillamma

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಶಾಮನ
ಸೂರದಾಸ ಪ್ರಿಯಶಾಮನ ಶಾಮನ ಮುತ್ತಿಟ್ಟು ನಕ್ಕಳು ಗೋಪಿ ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------------------------------------------------------

Amma naanu devaraane benne kaddillamma

Amma naanu devaraane benne kaddillamma
ella seri nanna baayige benneya mettidaramma ||

neene nodu bennegadige soolina neluvalli
hege taane tegeyali amma nanna putta kaigalalli ||

shaama helida benne mettida tanna baayi oresuttaa
benne oresida kaiya benna hinde maresuttaa ||

Ettida kaiya kadagolannu moolelittu nakkalu gopi
sooradaasa priyashaamana shaamana
sooradaasa priya shaamana muttittu nakkalu gopi ||

Monday, 7 November 2011

ಲೋಕದ ಕಣ್ಣಿಗೆ ರಾಧೆಯು ಕೂಡ... / Lokada kannige radheyu kooda

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ,
ಭಾವಿಸಿ ಸೇರಲು ಬೃಂದಾವನವ,
ರಾಧೆ ತೋರುವಳು ದಾರಿ.

ಮಹಾಪ್ರವಾಹ, ತಡೆಯುವರಿಲ್ಲ,
ಪಾತ್ರವಿರದ ತೊರೆ ಪ್ರೀತಿ.
ತೊರೆದರು ತನ್ನ, ತೊರೆಯದು ಪ್ರಿಯನ,
ರಾಧೆಯ ಪ್ರೀತಿಯ ರೀತಿ, ಇದು
ರಾಧೆಯ ಪ್ರೀತಿಯ ರೀತಿ. 

                                          - ಹೆಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------------------------------------------------------
Lokada kannige raadheyu kooda 

Lokada kannige raadheyu kooda
ellarante ondu hennu.
nanago aake krishnana toruva
preetiyu needida kannu.

tingala raatri toreya sameepa
uridare yaavudo deepa,
yaaro mohana, yaava radhego,
padutiruvanu paritaapa.

naanu nannadu nannavarennuva
halavu todakugala meeri,
bhaavisi seralu brundaavanava
radhe toruvalu daari.

mahaapravaaha, tadeyuvarilla
paatravirada tore preeti
toredaru tanna toreyadu priyana
raadheya preetiya reeti, idu
raadheya preetiya reeti

                                             - H.S. Venkatesha Murthy

Saturday, 27 August 2011

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ / Ishtu kaala ottigiddu eshtu beretaru

ರಚನೆ: ಹೆಚ್.ಎಸ್. ವೆಂಕಟೇಶ ಮೂರ್ತಿ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ 
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ

ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ 
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ 

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ 
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ....

ಇಷ್ಟು ಕಾಲ ಒಟ್ಟಿಗಿದ್ದೂ..... 

Thursday, 25 August 2011

ಹುಚ್ಚು ಖೋಡಿ ಮನಸು !! / Hucchu khodi manasu

ರಚನೆ : ಹೆಚ್.ಎಸ್. ವೆಂಕಟೇಶ ಮೂರ್ತಿ  

ಹುಚ್ಚು ಖೋಡಿ ಮನಸು 
ಅದು ಹದಿನಾರರ ವಯಸು 

ಮಾತು ಮಾತಿಗೇಕೋ ನಗು 
ಮರುಘಳಿಗೇ ಮೌನ,
ಕನ್ನಡಿ ಮುಂದಷ್ಟು ಹೊತ್ತು 
ಬರೆಯದಿರುವ ಕವನ ||

ಸೆರಗು ತೀಡಿದಷ್ಟು ಸುಕ್ಕು 
ಹಠ ಮಾಡುವ ಕೂದಲು 
ನಿರಿ ಏಕೋ ಸರಿಯಾಗದು 
ಮತ್ತೆ ಒಳಗೆ ಹೋದಳು ||

ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೇ 
ನಗುತ ಅವಳ ಛೇಡಿಸುತಿದೆ 
ಗಲ್ಲದ ಕರಿ ಮಚ್ಚೆ ||

ಬರಿ ಹಸಿರು ಬರಿ ನೋವು 
ಎದೆಯೊಳೆಷ್ಟು ಹೆಸರು 
ಯಾರ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||

Sunday, 24 July 2011

ತೂಗುಮಂಚ / Tugumancha

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು |
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ 
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು ||

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ 
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು |
ಸೆರಗು ಜಾರುತಿರಲು ಕೆಳಗೆ ಬಾನುಭೂಮಿ ಮೇಲು ಕೆಳಗೆ 
ಅದುರುತಿರುವ ಅಧರಗಳಿಗೆ ಬೆಳ್ಳಿಹಾಲ ಬಟ್ಟಲು ||

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು 
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೆಲಿತೋ 
ತನಗೆ ತಾನೇ ತೂಗುಮಂಚ ತಾಗುತಿತ್ತು ದೂರದಂಚ 
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ

Download This Song