ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Thursday 30 August 2012

ಬಾ ಇಲ್ಲಿ ಸಂಭವಿಸು / baa illi sambhavisu

ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ*,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ.

ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!

                                                                  - ಕುವೆಂಪು 

* ಇದು ಮೂಲ ಕವನದ ಸಾಲು. ತಾಳ, ಲಯವನ್ನು ಹೊಂದಿಸಲು ಅಶ್ವಥ್ ರವರು ಇದನ್ನೇ "ಬಾ ಇಲ್ಲಿ ಸಂಭವಿಸು" ಎಂದು ಬದಲಿಸಿಕೊಂಡಿದ್ದಾರೆ.

Wednesday 29 August 2012

ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು / Dharegavatarisida svargada spardhiyu

ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು
ಸುಂದರ ತಾಯ್ನೆಲವು, ನಮ್ಮೀ ತಾಯ್ನೆಲವು.
ದೇವಿ ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು.
                                                        ..... ನಮ್ಮೀ ತಾಯ್ನೆಲವು.

ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿನ ಹಸಿರಿನ ಸೆರಗು
ಕಣಕಣ ಮಂಗಲವು.
                                                        ..... ನಮ್ಮೀ ತಾಯ್ನೆಲವು.

ಕಾಶ್ಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲೆಯಾಚಲದಲಿ ಗಂಧದ ಪವನ
ವಿಧ ವಿಧ ಹೂ ಫಲವು

                                                        ..... ನಮ್ಮೀ ತಾಯ್ನೆಲವು.

ಹಲವು ಭಾಷೆ ನುಡಿ ಲಿಪಿಗಳ ತೋಟ
ವಿಧ ವಿಧ ಪಂಥ ಮತಗಳ ರಸದೂಟ
ಕಾಣ್ವದು ಕಾಮನಬಿಲ್ಲಿನ ನೋಟ
ಬಗೆ ಬಗೆ ಸಂಕುಲವು.
                                                        ..... ನಮ್ಮೀ ತಾಯ್ನೆಲವು.

ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ
ಮುಡುಪಿದು ಬದುಕು ನಿನಗೆ ಅನನ್ಯ
ಕ್ಷಣ ಕ್ಷಣ ಬಲ ಛಲವು.
                                                        ..... ನಮ್ಮೀ ತಾಯ್ನೆಲವು.

                           
                                                                                          - ಕುವೆಂಪು.

ಜಯ ಭಾರತ ಜನನಿಯ ತನುಜಾತೆ / Jaya bhaarata jananiya tanujaate

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನರವತರಿಸಿದ
                                                         ಭಾರತ ಜನನಿಯ ತನುಜಾತೆ..

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ..
                                                         ಭಾರತ ಜನನಿಯ ತನುಜಾತೆ...

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ.
ಕಬ್ಬಿಗರುದಿಸಿದ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ..
                                                         ಭಾರತ ಜನನಿಯ ತನುಜಾತೆ...
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ...
                                                         ಭಾರತ ಜನನಿಯ ತನುಜಾತೆ...

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ...
                                                         ಭಾರತ ಜನನಿಯ ತನುಜಾತೆ...


                                                                                                         - ಕುವೆಂಪು

Download this song

Saturday 25 August 2012

ದೀಪಗಳ ದಾರಿಯಲಿ / Deepagala daariyali

ದೀಪಗಳ ದಾರಿಯಲಿ ನಡುನಡುವೆ ನೆರಳು,
ನೆರಳಿನಲಿ ಸರಿವಾಗ ಯಾವುದೋ ಬೆರಳು
ಬೆನ್ನಿನಲಿ ಹರಿದಂತೆ ಭಯಚಕಿತ ಜೀವ
ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ.

ಆಸೆ ಕನಸುಗಳೆಲ್ಲ ತೀರಿದುವು ಕುಸಿದು,
ಭಾಷೆಗೂ ಸಿಗದಂಥ ಭಯದ ಮಳೆ ಬೆಳೆದು,
ಕಪ್ಪು ಮೋರೆಯ ಬೇಡ ಕರಿದಾರ ಹಿಡಿದು
ಪಕ್ಕದಲಿ ಹೋದನೇ ಪ್ರಾಣಕ್ಕೆ ಮುನಿಸು?

ನಾಲಗೆಗೆ ಇರುಳ ಹನಿ ತಾಕಿತೋ ಹೇಗೆ?
ಕೊರಳ ಬಳಿ ಬಳ್ಳಿ ಸರಿದಾಡಿತೋ ಹೇಗೆ?
ನಟ್ಟಿರುಳಿನಲಿ ಯಾರೊ ಹಿಂದೆಯೇ ಬಂದು
ಥಟ್ಟನೇ ಹೆಗಲನ್ನು ಜಗ್ಗಿದರೊ ಹೇಗೆ?

ಅಯ್ಯೋ ದೇವರೆ ಎಂದು ಚೀರುವಂತಾಗಿ
ನಡುಕಗಳು ನಾಲಿಗೆಗೆ ಮೂಡದಂತಾಗಿ
ಬಿಚ್ಚುತಿರೆ ದೂರದಲಿ ಮತ್ತೆ ದೀಪಗಳು,
ಬೆಚ್ಚನೆಯ ಬೆಳಕಿನಲಿ ಮತ್ತೆ ಕನಸುಗಳು. 

                                      - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ 

Thursday 23 August 2012

ಉರಿವ ಬಿಸಿಲಿರಲಿ, ಕೊರೆವ ಚಳಿ ಇರಲಿ / Uriva bisilirali


ಉರಿವ ಬಿಸಿಲಿರಲಿ, ಕೊರೆವ ಚಳಿ ಇರಲಿ,
ನಮ್ಮ ಮನದೊಳಿರಲಿ ನಿನ್ನ ಧ್ಯಾನ.
ಶರಣರ ನೆಲವೇ, ತರುಣರ ಛಲವೇ,
ನಿನ್ನ ಚರಣತಲಕೆ ನಮ್ಮ ಪ್ರಾಣ.

ಊನವಾಗಿ ನಿನ್ನ ಮಾನ
ನಾವು ಜೀವಿಸಿದ್ದು ಫಲವೇನಾ ?
ದೇವರ ನೆಲವೇ ಕಾಯ್ವರ ಫಲವೇ
ನಿನ್ನ ನೇರವಿರಿಸೆ ನಮ್ಮ ಪ್ರಾಣ.

ಹೊಟ್ಟೆ ಹೊರೆಯಲು ರಟ್ಟೆ ಬೀಸುವ
ನಾವು ಹಿಟ್ಟಿನಾಳ್ಗಳಲ್ಲ
ಹುಟ್ಟಿನಿಂದ ನಿನ್ನ ಹೊರೆವ ಹೊಣೆ ಹೊತ್ತ
ದಿಟ್ಟರಾರು ಶಿವ ಬಲ್ಲ.
ನಿನ್ನ ಮುಟ್ಟಿ ಬಹಕೆ ಬದುಕಿಲ್ಲ.

ಧೀರರ ನಾಡೆ ವೀರರ ಬೀಡೆ
ನಿನ್ನ ಸೇವೆಗೈಯದವ ಹೊಲ್ಲ

                                            - ಪು.ತಿ.ನ. 

Download this song

Tuesday 14 August 2012

ಆಕಾಶಕ್ಕೆದ್ದು ನಿಂತ.... ನಾವು ಭಾರತೀಯರು / Akaashakkeddu ninta

ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ -

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತನಿಡುವ ಬೇರ್ದೆರೆಗಳ ಗಾನದಲ್ಲಿ
ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರಘೋಷವೇಳುವಲ್ಲಿ
ಕಣ್ಣು ಬೇರೆ ನೋಟವೊಂದು ನಾವು ಭಾರತೀಯರು.

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ
ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಭಾಷೆ ಬೇರೆ ಭಾವವೊಂದು ನಾವು ಭಾರತೀಯರು

ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೇ ಇರಲಿ ನಾವು ಒಂದು ನಾವು ಭಾರತೀಯರು.

                                                               - ಕೆ. ಎಸ್. ನರಸಿಂಹ ಸ್ವಾಮಿ.

Sunday 12 August 2012

ನೇಗಿಲ ಯೋಗಿ / Negila Yogi

ನೇಗಿಲ ಹಿಡಿದ, ಹೊಲದೊಳು ಹಾಡುತ,
ಉಳುವ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೇ ಪೂಜೆಯು,
ಕರ್ಮವೇ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಟಿನಿಯಮದೊಳಗವನೇ ಭೋಗಿ.
                                               ಉಳುವ ಯೋಗಿಯ....

ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೇ ಇಲ್ಲ.
                                               ಉಳುವ ಯೋಗಿಯ....

ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ,
ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ,
ನೇಗಿಲ ಮೇಲೆಯೇ ನಿಂತಿದೆ ಧರ್ಮ.
                                               ಉಳುವ ಯೋಗಿಯ....

                                                                                         - ಕುವೆಂಪು

Friday 10 August 2012

ಕುರಿಗಳು, ಸಾರ್, ಕುರಿಗಳು ..... / Kurigalu Saar Kurigalu.....

                       - 1 - 

ಕುರಿಗಳು, ಸಾರ್, ಕುರಿಗಳು;
ಸಾಗಿದ್ದೇ
ಗುರಿಗಳು.

ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ
ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ,
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲುಕಡ್ಡಿ ಮೇವು, ಅಂಡಲೆಯುವ ನಾವು ನೀವು,
ಕುರಿಗಳು, ಸಾರ್, ಕುರಿಗಳು;
ನಮಗೋ ನೂರು ಗುರಿಗಳು.

ಎಡ ದಿಕ್ಕಿಗೆ, ಬಲ ದಿಕ್ಕಿಗೆ, ಒಮ್ಮೆ ದಿಕ್ಕುಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೋ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬರಲು ಹಾಯದ
ಅವರು, ಇವರು, ನಾವುಗಳು
ಕುರಿಗಳು, ಸಾರ್, ಕುರಿಗಳು,


                      - 2 -

ಮಂದೆಯಲ್ಲಿ ಎಲ್ಲವೊಂದೆ ಆದಾಗಲೇ ಸ್ವರ್ಗ ಮುಂದೆ --
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆ ಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆ ಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ,
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು, ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು? 


                   - 3 -

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು,
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು;
ಜಮಾಬಂದಿಗಮಲ್ದಾರ ಬರಲು ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚ ಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ,
ಕಿಸೆಗೆ ಹಸಿರು ನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಿನಲ್ಲಿ ನಮ್ಮ ದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು,
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು.
ಬೆಟ್ಟ ದಾಟಿ ಕಿರುಬ ನುಗ್ಗಿ, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ  --
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು,
ನಮ್ಮ ಕಾಯ್ವ ಗೊಲ್ಲರು.


                      - 4 -


ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.

ಕಿಂಡಿಯಿಂದ ತೆವಳಿ ಬಂದ ಗಾಳಿ ಕೂಡ ನಮ್ಮದೇನೆ;
ನಮ್ಮ ಮುಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪು ಸವರಿ
ಒಣಗಲಿಟ್ಟ ಹಸಿ ತೊಗಲಿನ ಬಿಸಿಬಿಸಿ ಹಬೆ ವಾಸನೆ,
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈ ನಾತದ ಗಬ್ಬಿನಲ್ಲಿ,
ಇದರ ಉಸಿರು ಅದು, ಮತ್ತೆ ಅದರ ಉಸಿರು ಇದು ಮೂಸಿ --
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮ ನಾವೆ ಅಂದುಕೊಂಡೊ, ಉಗುಳು ನುಂಗಿ ನೊಂದುಕೊಂಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು --
ಕುರಿಗಳು, ಸಾರ್, ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೋ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣು ಕುಕ್ಕಿ ಸೊಕ್ಕಿರುವ, ಹೋಗಿ ಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ,
ನಾವು, ನೀವು, ಅವರು, ಇವರು
ಕುರಿಗಳು, ಸಾರ್, ಕುರಿಗಳು!

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳದ ಕಿಚ್ಚಿನಲ್ಲಿ,
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು .....

                                                                       - ಕೆ. ಎಸ್. ನಿಸಾರ್ ಅಹಮದ್

* 1, 3ನೇ ಚರಣಗಳು ಮತ್ತು 4 ನೇ ಚರಣದ ಕೊನೆಯ ಸಾಲುಗಳನ್ನು ಭಾವಗೀತೆಯಲ್ಲಿ ಬಳಸಲಾಗಿದೆ. ಇದು ಮೂಲ ಕವನದ ಪೂರ್ಣಪಾಠ.

Tuesday 7 August 2012

ಮನಸೇ ನನ್ನ ಮನಸೇ / Manase nanna manase...

ಮನಸೇ ನನ್ನ ಮನಸೇ ಏನಾಗಿದೆ ನಿನಗೆ ?
ಏಕೆ ಅವಳ ಕಹಿ ನೆನಪೇ ಜೇನಾಗಿದೆ ನಿನಗೆ ?

ಬೇಡವೆಂದರೂ ಏಕೆ ತರುವೆ ಕಣ್ಮುಂದೆ ಅವಳ ಚಿತ್ರ,
ಬೂಟಾಟಿಕೆ ಆ ನಾಟಕ ಅವಳ ವಿವಿಧ ಪಾತ್ರ.

ಪದೇ ಪದೇ ಮತ್ತದೇ ಜಾಗಕ್ಕೆ ನನ್ನ ಸೆಳೆವೆಯೇಕೆ?
ಕಂಡು ಮರುಗಲು ಕುಸಿದ ಅರಮನೆ, ಉರುಳಿದ ಪ್ರೇಮ ಪತಾಕೆ.

ಮಣ್ಣಾಗಿದೆ ನನ್ನ ಪ್ರೀತಿ ಹೃದಯದ ಗೋರಿಯಲ್ಲಿ.
ಗೊರಿಯನ್ನೇಕೆ ಬಗೆಯುವೆ ಮೋಹದ ಹಾರೆಯಲ್ಲಿ.

(ರಚನೆ ಯಾರದೆಂದು ತಿಳಿದಿಲ್ಲ).

ಕಿಟಕಿಯ ಬಾಗಿಲು ತೆರೆದಿತ್ತಂದು / Kitakiya baagilu teredittandu..


ಕಿಟಕಿಯ ಬಾಗಿಲು ತೆರೆದಿತ್ತಂದು,
ಸುತ್ತಲು ಕತ್ತಲೆ ಸುರಿದಿತ್ತಂದು,
ಚಂದಿರನಡಿಯಲಿ ಮೆರೆದಿತ್ತೊಂದು.
ತಾರಕೆ ಬಾನಿನೊಳು.

ಮಂಚದ ಮೇಗಡೆ ಅವಳಿಗೆ ನಿದ್ದೆ,
ನನಗೋ ಎಚ್ಚರ ಓದುತಿದ್ದೆ.
ಬೇಸರವಾಯಿತು ಮಲಗಲು ಎದ್ದೆ,
ಎಲ್ಲವು ಸುಮ್ಮನಿರೆ

ಬಂದಿತು ಮುತ್ತನು ಕದಿಯುವ ಬಯಕೆ,
ಮೋಸವು ತಿಳಿದರೆ ಮುನಿಯಳೆ ಈಕೆ?
ಎನ್ನುವ ಅಂಜಿಕೆ
ಚಂದಿರ, ಜೋಕೆಎಂದೆಚ್ಚರಿಸುತಿರೆ.

ತಾರೆಗಳೆಲ್ಲ ನೋಡುವುದೆಂದು,
ಕಿಟಕಿಯ ಬಾಗಿಲ ಬಂಧಿಸಿ ಬಂದು,
ಉರಿಯುವ ದೀಪವು ಅರಿಯುವುದೆಂದು,
ಆರಿಸಲೆಳೆಸಿದೆನು.

ಕಂಡರೆ ದೀಪವು ಹೇಳುವುದೇನು,
ಎಂದೆನ್ನನು ಮೈ ದಡವಿದುದೆಲರು.
ದೀಪವು ಇನ್ನು ಹೊಸತಿದು ಎಂದು,
ಮೌನದಿ ಬೆಳಗಿದುದು.

ಮೂಡಣ ಬೆಳಕಿನ ಬಾಗಿಲ ತೆರೆದು,
ಬಂದಳು ಉಷೆ ಪನ್ನೀರ್ಮಳೆಗರೆದು.
ನಕ್ಕಳು ಇಂದಿರೆ ಏತಕೆ ಎನಲು,
ದೀಪವ ನೋಡಿದಳು.

                                                      - ಕೆ.ಎಸ್. ನರಸಿಂಹಸ್ವಾಮಿ