ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Friday, 27 January 2012

ಹೆಂಡತಿಯ ಕಾಗದ (ತೌರ ಸುಖದೊಳಗೆನ್ನ ...) / Toura sukhadolagenna

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
     ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು,
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
     ಇರುಳಿನಲಿ ಕಾಣುವುದು ನಿಮ್ಮ ಕನಸು.

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
     ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ;
ನೀಲಾಂಬರದ ನಡುವೆ ಚಂದಿರನು ಬಂದಾಗ
     ರೋಹಿಣಿಯು ಬೆಳಗುವಳು ಸನ್ನಿಧಿಯಲಿ.

ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ;
     ಇನ್ನು ತಂಗಿಯ ಮದುವೆ ತಿಂಗಳಿಹುದು.
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ,
     ಐದು ತಿಂಗಳ ಕಂದ ನಗುತಲಿಹುದು.

ಕಣ್ಣೆದುರಿಗಿರುವಾಗ ನಿಮ್ಮ ಮನವುಕ್ಕುವುದು
     ಕ್ಷೀರಸಾಗರದಂತೆ ಶಾಂತಿಯೊಳಗೆ.
ಕಣ್ಣ ಮರೆಯಾದಾಗ ಹೂವೆಲ್ಲ ಹಾವೆಂದು
     ಬಿರುನುಡಿಯನಾಡುವುದು ನಿಮಗೆ ತರವೆ?

ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
     ಮೈಸೂರ ಸೇರುವುದು ನಾನು ಬಲ್ಲೆ.
ನಾಳೆ ಮಂಗಳವಾರ; ಮಾರನೆಯ ದಿನ ನವಮಿ;
     ಆಮೇಲೆ ನಿಲ್ಲುವೇನೆ ನಾನು ಇಲ್ಲೇ?

ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳುಹುವರು,
     ಕಂದನಿಗೆ ಹೊಸ ಜರಿಯ ಲಂಗವುಡಿಸಿ.
ತಂದೆಯವರೇ ಬಂದು ತಪ್ಪಾಯಿತೆನ್ನುವರು;
     ಹೆಣ್ಣ ಹೆತ್ತವರನ್ನು ದೂರಬೇಡಿ.

ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
    ಅಚ್ಚಮಲ್ಲಿಗೆಯರಳು ಬಿರಿಯುತಿಹುದು.
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ,
    ಚುಚ್ಚದಿರಿ ಮೊನೆಯಾದ ಮಾತನೆಸೆದು.

                                                         - ಕೆ. ಎಸ್. ನರಸಿಂಹ ಸ್ವಾಮಿ

Wednesday, 25 January 2012

ಮಲಗೋ ಮಲಗೆನ್ನ ಮರಿಯೆ / Malago malagenna mariye

ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ,
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಬುವಿಗೆ?

ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು,
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ,
ನಿದ್ದೆಯ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು!

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ,
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ,
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗೂ ಮೂರು ನಾಮ!

                                                   - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ

Sunday, 22 January 2012

ಯಾವುದೀ ಹೊಸ ಸಂಚು / Yaavudee hosa sanchu

ಯಾವುದೀ ಹೊಸ ಸಂಚು
ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು?
ಗಿರಿಕಮರಿಯಾಳದಲಿ
ತೆವಳಿದ್ದ ಭಾವಗಳ
ಮುಗಿಲ ಮಂಚದೊಳಿಟ್ಟು ತೂಗುತಿಹುದು?

ಸತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪವುರಿದು,
ಬಾಳು ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ
ಮೈಯ ಕಣಕಣದಲ್ಲೂ ಹಿಗ್ಗು ಉರಿದು.

ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪವೃಕ್ಷದ ಹಣ್ಣು ಹಿಳಿದ ರುಚಿಯ?
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಉಳಿಯದೆಯೆ ಸರಿದೀತು ಎಂಬ ವ್ಯಥೆಯ?

                                                         - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ

Tuesday, 17 January 2012

ವಿಶ್ವ ವಿನೂತನ ವಿದ್ಯಾಚೇತನ / Vishwa vinootana

ವಿಶ್ವ ವಿನೂತನ ವಿದ್ಯಾಚೇತನ
ಸರ್ವಹೃದಯ ಸಂಸ್ಕಾರಿ | ಜಯ ಭಾರತಿ ||

ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ | ಪವಿತ್ರಿತ ಕ್ಷೇತ್ರ ಮನೋಹಾರಿ ||

ಗಂಗಕದಂಬ ರಾಷ್ಟ್ರಕೂಟ ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ ||

ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲತರಂಗ
ವಿಶ್ವ ಭಾರತಿಗೆ ಕನ್ನಡದಾರತಿ | ಮೊಳಗಲಿ ಮಂಗಳ ಜಯಭೇರಿ ||

                                                             - ಚೆನ್ನವೀರ ಕಣವಿ

Tuesday, 3 January 2012

ಈ ವಿರಹ ಕಡಲಾಗಿದೆ / Ee viraha kadalaagide

ಈ ವಿರಹ ಕಡಲಾಗಿದೆ.. ನೀನಿರದೆ
ಇನಿದಾದ ಸನಿಹ ಸಿಗದೆ
ಸವಿ ನೆನಪೆ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||

ಹೂಡಿದ ಹಸಿ ಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
                                     ಸವಿ ನೆನಪೇ...

ಪ್ರೀತಿಯ ಸಿರಿ ವೀಣೆ ಮೀಟಿದೆ ಈ ಹೃದಯ
ಕುಂತಲ್ಲಿ ನಿಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖ ಕೋರಿ ಬೇಡಿದೆ
                                     ಸವಿ ನೆನಪೇ...

                                                   - ಪ್ರೊ. ದೊಡ್ಡರಂಗೇಗೌಡ

Download This Song