ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Friday, 30 March 2012

ಬಾ ಸವಿತಾ... / Baa Savitaa

ಬಾ ಸವಿತಾ.... ಬಾ ಸವಿತಾ...

ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೇ ಒಳಿತೆಂಬುದರ ಚಳಕವೆಲ್ಲಕೆ
ವಿನಾಶವ ತಾ....
                                                            ಬಾ ಸವಿತಾ..

ನೆಲೆಯಿಂದ ಹೊರಟು ಅಲೆ ಅಲೆ.. ಅಲೆ ಅಲೆ..
ಛಲತೊಟ್ಟ ಮಲ್ಲವಾಹಿನಿ ಬಾ..
ನಿಲವಿಲ್ಲ ಜಗದಿ ಕತ್ತಲಿಗೆಂದು
ಗೆಲವನು ಸಾರುವ ಭಾಸವ ತಾ....  
                                                             ಬಾ ಸವಿತಾ...

ಓಂ ತತ್ಸವಿತುರ್ವರೇಣ್ಯವೆ೦ಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳಗಿಸಿ, ನಿರುಪಿಸಿ ಕಾಂಬೆವು
ಶಾಂತ ಸುಂದರ ಶಿವದಾಸವಿತಾ...  
                                                              ಬಾ ಸವಿತಾ...

(ರಚನೆ ಯಾರದೆಂದು ತಿಳಿದಿಲ್ಲ, ತಿಳಿದವರು ಹೇಳಿದರೆ ಸಹಾಯವಾದೀತು).

Thursday, 22 March 2012

ಯುಗ ಯುಗಾದಿ ಕಳೆದರೂ / Yuga yugadi kaledaru

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

                    ಹೊಂಗೆ ಹೂವ ತೊಂಗಳಲಿ,
                    ಭೃಂಗದ ಸಂಗೀತ ಕೇಳಿ
                    ಮತ್ತೆ ಕೇಳ ಬರುತಿದೆ.
                    ಬೇವಿನ ಕಹಿ ಬಾಳಿನಲಿ
                    ಹೂವಿನ ನಸುಗಂಪು ಸೂಸಿ
                    ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.

                    ನಿದ್ದೆಗೊಮ್ಮೆ ನಿತ್ಯ ಮರಣ,
                    ಎದ್ದ ಸಲ ನವೀನ ಜನನ,
                    ನಮಗೆ ಏಕೆ ಬಾರದು?
                    ಎಲೆ ಸನತ್ಕುಮಾರ ದೇವ,
                    ಎಲೆ ಸಾಹಸಿ ಚಿರಂಜೀವ,
                    ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

                                                  - ಅಂಬಿಕಾತನಯದತ್ತ
------------------------------------------------------------------------------------------------------


ಕನ್ನಡ ಭಾವಗೀತೆಗಳ ಅಭಿಮಾನಿಗಳಿಗೂ, ನನ್ನ ಪ್ರಯತ್ನಕ್ಕೆ ಇಂಬು ಕೊಟ್ಟ ಎಲ್ಲ ಸಹೃದಯರಿಗೂ ಯುಗಾದಿಯ, ನೂತನ ಸಂವತ್ಸರ ಸಂತಸವನ್ನು ತರಲೆಂದು ಬಯಸುತ್ತಾ.. ಈ ಗೀತೆ. ಹೊಸ ವರುಷದ ಶುಭ ಕಾಮನೆಗಳು - ವಸು.

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ/ Elli hoguviri nilli modagale

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ .

              ನನ್ನೆದೆಯ ಹಸಿರ ಉಸಿರು ಕುಗ್ಗಿದರು
              ಬರಲಿಲ್ಲ ನಿಮಗೆ ಕರುಣ
              ನನ್ನ ಹೃದಯದಲಿ ನೋವು ಮಿಡಿಯುತಿದೆ
              ನಾನು ನಿಮಗೆ ಶರಣ.

ಬಡವಾಗದ ನನ್ನ ಒಡಲುರಿಯ ಬೇಗೆ 
ನಿಮಗರಿವು ಆಗಲಹುದೇ?
ನೀಲಗಗನದಲಿ ತೇಲಿ ಹೋಗುತಿಹ
ನಿಮ್ಮನೆಳೆಯಬಹುದೇ?

              ಬಾಯುಂಟು ನನಗೆ, ಕೂಗಬಲ್ಲೇನಾ
              ನಿಮ್ಮೆದೆಯ ಪ್ರೇಮವನ್ನು.
              ನೀವು ಕರುಣಿಸಲು ನನ್ನ ಹಸಿರೆದೆಯು
              ಉಸಿರುವುದು ತೋಷವನ್ನು.

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ
ನನ್ನೆದೆಗೆ ತಂಪತನ್ನಿ,
ನೊಂದ ಜೀವರಿಗೆ ತಂಪನೀಯುವುದೇ
ಪರಮ ಪೂಜೆಯೆನ್ನಿ.

                                                                - ಡಾ. ಜಿ. ಎಸ್. ಶಿವರುದ್ರಪ್ಪ 

Wednesday, 21 March 2012

ನಾನು ಬಡವಿ ಆತ ಬಡವ / Naanu badavi aata badava

ನಾನು ಬಡವಿ ಆತ ಬಡವ
      ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
      ಅದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
      ಅವನೆ ರಂಗಸಾಲೆ
ಕಣ್ಣು ಕಟ್ಟುವಂಥ ಮೂರ್ತಿ
      ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದ
      ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬಾ
      ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ
      ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
      ಕೆನ್ನೆ ತುಂಬಾ ಮುತ್ತು

ಕುಂದು ಕೊರತೆ ತೋರಲಿಲ್ಲ
      ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
      ತುಟಿಗೆ ಹಾಲು ಜೇನು.     

                                           - ಅಂಬಿಕಾತನಯದತ್ತ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ / Hendatiyobbalu maneyolagiddare

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ |
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ ||

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ, ಹೋಳಿಗೆ ದೀಪ |
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿಲ್ಲದ ಕೋಪ ||

ಭರಣಿಯ ತೆರೆದರೆ ಅರಿಶಿನ ಕುಂಕುಮ
ಅವಳದು ಈ ಸಂಪತ್ತು |
ತುಟಿಗಳ ತೆರೆದರೆ ತುಳುಕುವುದಿ೦ಪಿನ
ಎರಡೋ ಮೂರೋ ಮುತ್ತು ||

ಕೈ ಹಿಡಿದವಳು, ಕೈ ಬಿಡದವಳು
ಮಾಡಿದಡಿಗೆಯೇ ಚಂದ,
ನಾಗರ ಕುಚ್ಚಿನ ನಿಡುಜಡೆಯವಳು,
ಈಕೆ ಬಂದುದೆಲ್ಲಿಂದ?

ಚಂದಿರನೂರಿನ ಅರಮನೆಯಿಂದ
ಬಂದವರೀಗೆಲ್ಲಿ?
ಬೆಳ್ಳಿಯ ಕೋಟೆಯ ಬಾಗಿಲಿನಿಂದ
ಬಂದವರೀಗೆಲ್ಲಿ?

ಹೆಂಡತಿಯೊಂದಿಗೆ ಬಡತನ ದೊರೆತನ
ಏನೂ ಭಯವಿಲ್ಲ |
ಹೆಂಡತಿಯೊಲುಮೆಯ ಭಾಗ್ಯವನರಿಯದ
ಗಂಡಿಗೆ ಜಯವಿಲ್ಲ ||

                                                     - ಕೆ. ಎಸ್. ನರಸಿಂಹ ಸ್ವಾಮಿ     

ಅಳುವ ಕಡಲೊಳು ತೇಲಿ ಬರುತಲಿದೆ / Aluva kadalolu teli barutalide

ಅಳುವ ಕಡಲೊಳು ತೇಲಿ ಬರುತಲಿದೆ
      ನಗೆಯ ಹಾಯಿ ದೋಣಿ |
ಬಾಳ ಗಂಗೆಯ ಮಹಾ ಪೂರದೊಳು
      ಸಾವಿನೊಂದು ವೇಣಿ ||

ನೆರೆತಿದೆ ಬೆರೆತಿದೆ ಕುಣಿವ ಮೊರೆವ
      ತೆರೆ ತೆರೆಗಳೋಳಿಯಲ್ಲಿ |
ಜನನ ಮರಣಗಳ ಉಬ್ಬುತಗ್ಗು ಹೊರ
      ಳುರುಳುವಾಟವಲ್ಲಿ ||

ಆಶೆ ಬೂದಿ ತಳದಲ್ಲು ಕೆರಳುತಿವೆ
      ಕಡಿಗಳೆನಿತೋ ಮರಳಿ |
ಮುರಿದು ಬಿದ್ದ ಮನ ಮರದ ಕೊರಳು
      ಹೂವು ಅರಳಿ ಅರಳಿ  ||

ಆಶೆಯೆಂಬ ತಳವೊಡೆದ ದೋಣಿಯಲಿ
      ದೂರತೀರಯಾನ |
ಯಾರ ಲೀಲೆಗೋ ಯಾರೋ ಏನೋ ಗುರಿ
      ಯಿರದೆ ಬಿಟ್ಟ ಬಾಣ ||

ಇದು ಬಾಳು ನೋಡು ಇದ ತಿಳಿದೆನೆಂದರೂ
      ತಿಳಿದ ಧೀರನಿಲ್ಲಿ |
ಹಲವುತನದ ಮೈ ಮರೆಸುವಾತವಿದು
      ನಿಜವು ತೋರದಲ್ಲಿ ||

ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ
      ವೇಕೊ ಮಲೆತು ಕಲೆತು
ಕೊನೆಗೆ ಕರಗುವೆವು ಮರಣ ತೀರ ಘನ
      ತಿಮಿರದಲ್ಲಿ ಬೆರೆತು ||

                                                         - ಎಂ.ಗೋಪಾಲ ಕೃಷ್ಣ ಅಡಿಗ  

ಚಿಮ್ಮುತ ನಿರಿಯನು... ಬಿಂಕದ ಸಿಂಗಾರಿ / Binkada singaari

ಚಿಮ್ಮುತ ನಿರಿಯನು ಬನದಲಿ ಬಂದಳು
       ಬಿಂಕದ ಸಿಂಗಾರಿ |
ಹೊಮ್ಮಿದ ಹಸುರಲಿ ಮೆರೆಯಿತು ಹಕ್ಕಿ
       ಕೊರಳಿನ ದನಿದೊರಿ ||

ಹೇಳೆಲೆ ಹಕ್ಕಿ, ಚೆಲುವನು ಸಿಕ್ಕಿ
       ನನಗೆ ಮದುವೆಯೆಂದು?
ಆಳಿಬ್ಬಿಬ್ಬರು ಕೇರಿಯ ಸುತ್ತಿ,
       ಹೆಗಲಲಿ ಹೊತ್ತಂದು!

ಹಕ್ಕಿಯೇ ಹೇಳೇ ಒಸಗೆಯ ಮಂಚವ
       ಸಿಂಗರಿಸುವರಾರು?
ಸೊಕ್ಕಿನ ಹೆಣ್ಣೇ, ಮಣ್ಣಿನ ಕುಳಿಯನು
       ಆಳದಿ ತೆಗೆಯುವರು

ಅಡವಿಯ ಮುಳ್ಳಲಿ ಮಿಂಚಿನ ಹುಳಗಳು
       ಪಂಜನು ಹಿಡಿಯುವುವು
ಗಿಡಗಳ ಹೊಲ್ಲಿನ ಗೂಬೆಗಳೆಲ್ಲ
       ಬಾ ಹಸೆಗೆನ್ನುವುವು!

                                                     - ಬಿ. ಎಂ.ಶ್ರೀ ಕಂಠಯ್ಯ

ಪ್ರೀತಿ ಕೊಟ್ಟ ರಾಧೆಗೆ... ಮಾತು ಕೊಟ್ಟ ಮಾಧವ / Preeti kotta raadhege maatu kotta maadhava

ಪ್ರೀತಿ ಕೊಟ್ಟ ರಾಧೆಗೆ
ಮಾತು ಕೊಟ್ಟ ಮಾಧವ |
ತನ್ನನಿತ್ತ ಕೊಳಲಿಗೆ
ರಾಗ ತೆತ್ತ ಮಾಧವ ||

ಗಂಧ ಕೊಟ್ಟ ಹೆಣ್ಣಿಗೆ
ಅಂದ ಕೊಟ್ಟ ಮಾಧವ |
ಅನ್ನ ಕೊಟ್ಟ ಭಕ್ತಗೆ
ಹೊನ್ನ ಕೊಟ್ಟ ಮಾಧವ ||

ಹಾಲು ಕೊಟ್ಟ ವಿಧುರಗೆ
ಬಾಳು ಕೊಟ್ಟ ಮಾಧವ |
ದೇಹ ಕೊಟ್ಟ ಮಣ್ಣಿಗೆ
ಜೀವ ಕೊಟ್ಟ ಮಾಧವ ||  

                                                - ಹೆಚ್. ಎಸ್. ವೆಂಕಟೇಶ ಮೂರ್ತಿ 

ಎಲ್ಲ ಮರೆತಿರುವಾಗ... / Ella maretiruvaaga

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಪ್ಪು ಕಣ್ಣಿನ ನೆಟ್ಟ ನೋಟದರೆಚಣದಲ್ಲಿ
ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನ
ಹಿರಿದು ಕೊಲ್ಲಲು ಬಳಿಗೆ ಬಾರದಿರು ನೆನಪೇ ||

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವ
ಬೆನ್ನಲ್ಲೇ ಇರಿಯದಿರು ಓ ಜಾಣ ನೆನಪೇ ||

                                                    - ಕೆ. ಎಸ್. ನಿಸಾರ್ ಅಹಮದ್ 

Tuesday, 20 March 2012

ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ... / Baagilolu kaimugidu

ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳನರ್ಪಿಸಿಲ್ಲಿ

ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿಯಿಲ್ಲ
ಭಗವಂತನಾನಂದ ರೂಪುಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ ||

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಚೆಯಲಿ ಮೈಮರೆತು ತೇಲುವುದು ಭೂಭಾರ ||

                                                                            - ಕುವೆಂಪು     

Monday, 19 March 2012

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ / banni bhaavagale banni nanndege

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ ||

ಬನ್ನಿ ಸ೦ಜೆ ಹೊಂಬಿಸಿಲಿನ ಹೊಳೆಯೊಳು
ಮೀಯುವ ಮುಗಿಲಿನಲಿ
ತವರಿನೆದೆಗೆ ತಂಪೆರೆಯುವ ಮೇಘದ
ಪ್ರೀತಿಯ ಧಾರೆಯಲಿ ||

ಲೋಕಕೆ ಹೊದಿಸಿದ ಕರಿತೆರೆ ಸರಿಸುವ
ಅರುಣೋದಯದಲ್ಲಿ
ಪಕ್ಷಕ್ಕೊಮ್ಮೆ ಬಿಳಿಪತ್ತಲ ನೇಯುವ
ಹುಣ್ಣಿಮೆ ಹಸ್ತದಲಿ ||

ಬನ್ನಿ ಬನ್ನಿ ನನ್ನೆದೆಯ ಬಯಲಿದು
ಬಿತ್ತದ ಕನ್ನೆನೆಲ
ಬೆಳೆಯಿರಿ ಇಲ್ಲಿ ಬಗೆ ಬಗೆ ತೆನೆಯ
ನಮಿಸುವೆ ನೂರು ಸಲ ||

ನಿಮ್ಮನೆ ಕನವರಿಸಿ
ನಿಮಗೇ ಮನವರಿಸಿ
ಕಾಯುತ್ತಿರುವೆನು ಕ್ಷಣಕ್ಷಣವೂ
ಎದೆಯನು ಹದಗೊಳಿಸಿ ||

                                       - ಎನ್. ಎಸ್, ಲಕ್ಷ್ಮಿನಾರಾಯಣ ಭಟ್ಟ    

    

ಸುಮಸುಂದರ ತರುಲತೆಗಳ... / Sumasundara tarulategala

ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಭೋಧ ಚಂದ್ರೋದಯ ರಾಗಾರುಣ ಜ್ವಾಲೆ
ಗಿರಿ ಸಿರಿ ಬನ ಸಂಚಾರಿಣಿ ತುಂಗಾಜಲ ಧಾರೆ
ಧಲ ಧಲ ಧಲ ಮೆದು ಹಾಸಲಿ ಗಾನ ಸುಪ್ತಲೋಲೆ ||

ಮಲೆನಾಡಿನ ಕೋಗಿಲೆಯೇ ಬಯಲನಾಡ ಮಲ್ಲಿಗೆಯೇ
ವಂಗ ವಿಷಯ ಭೃಂಗವೆ ಧವಳಗಿರಿಯ ಶೃ೦ಗವೆ
ಕಾವೇರಿ... ಗೋದಾವರಿ... ಗಂಗೆ ಯಮುನೆ ಸಿಂಧುವೆ ||

ಶತ ಶತ ಶತಮಾನಗಳ ಗುಪ್ತಗಾಮಿ ಚೇತನವೇ
ಋತು ಋತುವಿಗೂ ಹೂವಾಗಿ ಫಲವಾಗುವ ತನಿರಸವೇ
ಚಿಲಿಪಿಲಿಯಂಥಾಮೋದದಿ  ನಲಿದುಲಿವ ಕೂಜನವೇ
ಮಧುರ ಮಂದಾನಿಲ ಸೌಗಂಧದ ಸಿರಿ ಪರಿಮಳವೇ ||

ನಸು ಹಸುರಿನ ಹಿಮಮಣಿಯೇ
ಎಳೆ ಬಿಸಿಲಿನ ಮೆಲುದನಿಯೇ
ಬಿರಿದ ಮುಗಿಲ ಬಿಂಕವೇ
ತೆರೆದ ಸೋಗೆ ನರ್ತನವೇ ||

                                                         - ಸಾ. ಶಿ. ಮರುಳಯ್ಯ 

Thursday, 15 March 2012

ತಿಳಿಮುಗಿಲ ತೊಟ್ಟಿಲಲಿ... / Tili mugila tottilali

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತ್ತಿತ್ತು |
ಗರಿ ಮುದುರಿ ಮಲಗಿದ್ದ ಹಕ್ಕಿಗೂಡುಗಳಲ್ಲಿ
ಇರುಳು ಹೊಂಗನಸೂಡಿ  ಸಾಗುತ್ತಿತ್ತು ||

ಮುಗುಳಿರುವ ಹೊದರಿನಲಿ ನರುಗ೦ಪಿನುದರದಲಿ
ಜೇನುಗನಸಿನ ಹಾಡು ಕೇಳುತ್ತಿತ್ತು |
ತುಂಬು ನೀರಿನ ಹೊಳೆಯೊಳಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನ್ನು ಹೇಳುತ್ತಿತ್ತು ||

ಬರುವ ಮುಂದಿನ ದಿನದ ನವನವೊದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತ್ತಿತ್ತು |
ಶಾಂತ ರೀತಿಯಲಿರುಳು ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತ್ತಿತ್ತು ||

                                                           - ಎಸ್.ವಿ. ಪರಮೇಶ್ವರ ಭಟ್ಟ    

Saturday, 10 March 2012

ಯಾರಿಗೂ ಹೇಳೋಣು ಬ್ಯಾಡ... / Yarigu helonu byada

ಯಾರಿಗೂ ಹೇಳೋಣು ಬ್ಯಾಡ (೩)
ಹಾರಗುದರಿ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣಾಂತ ||೧||

ಯಾರಿಗೂ ಹೇಳೋಣು ಬ್ಯಾಡ
ಹಣ್ಣು ಹೂವು ತುಂಬಿದಂಥ
ನಿನ್ನ ತೋಟ ಸೇರಿ ಒಂದ
ತಿನ್ನೋಣಂತ ಅದರ ಹೆಸರ || ೨ ||


ಯಾರಿಗೂ ಹೇಳೋಣು ಬ್ಯಾಡ
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯದಲೇ ಆಡೋಣಂತ || ೩ ||

ಯಾರಿಗೂ ಹೇಳೋಣು ಬ್ಯಾಡ
ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ || ೪ ||


ಯಾರಿಗೂ ಹೇಳೋಣು ಬ್ಯಾಡ
ಹಾವಿನ ಮರಿಯಾಗಿ ಅಲ್ಲಿ
ನಾವೂನೂ ಹೆಡೆಯಾಡಿಸೋಣ
ಹೂವೆ ಹೂವು ಹಸಿರೆ ಹಸಿರು || ೫ ||

ಯಾರಿಗೂ ಹೇಳೋಣು ಬ್ಯಾಡ
ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೊಣಂತ
ಯಾರಿಗೂ ಹೇಳೋಣು ಬ್ಯಾಡ || ೬ ||

                                                   - ಅಂಬಿಕಾತನಯದತ್ತ 

Wednesday, 7 March 2012

ತನುವು ನಿನ್ನದು ಮನವು ನಿನ್ನದು / Tanuvu ninnadu manavu ninnadu

ತನುವು ನಿನ್ನದು ಮನವು ನಿನ್ನದು
ನನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು ||

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು ||


ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ |
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು ||


                                                    - ಕುವೆಂಪು 

Friday, 2 March 2012

ಅಗಣಿತ ತಾರಾ ಗಣಗಳ ನಡುವೆ / Aganita taaraganagala naduve

ಅಗಣಿತ ತಾರಾ ಗಣಗಳ ನಡುವೆ
        ನಿನ್ನನೆ ಮೆಚ್ಚಿದೆ ನಾನು.
ನನ್ನೀ ಜೀವನ ಸಮುದ್ರ ಯಾನಕೆ
        ಚಿರ ಧ್ರುವ ತಾರೆಯು ನೀನು.

ಇಲ್ಲದ ಸಲ್ಲದ ತೀರಗಳೆಡೆಗೆ
        ಹೊರಡುತ ಬಳಲಿದರೇನು.
ದಿಟ್ಟಿಯು ನಿನ್ನೊಳು ನೆಟ್ಟರೆ ತಾನು
        ತೀರವ ಸೇರೆನೆ ನಾನು?


ಚಂಚಲವಾಗಿಹ  ತಾರಕೆಗಳಲಿ
        ನಿಶ್ಚಲನೆಂದರೆ ನೀನೆ.
ಮಿಂಚಿ ಮಿನುಗುತಿಹ ನಶ್ವರದೆದೆಯಲಿ
        ಶಾಶ್ವತನೆಂದರೆ ನೀನೆ.

                                                - ಕುವೆಂಪು

(ನನಗೆ ತಿಳಿದಿರುವ ಮಟ್ಟಿಗೆ, ಇದರ ಮೂಲ ರಚನೆಕಾರ ಶೇಕ್ಸ್ಪಿಯರ್. ಅವನ ಸಾನೆಟ್ 116 ಆಧರಿಸಿ ಕವಿ ಇದನ್ನು ಕನ್ನಡಕ್ಕೆ ತಂದಿದ್ದಾರೆ). ಸಾನೆಟ್ ಇಲ್ಲಿದೆ - 

SONNET 116

Let me not to the marriage of true minds
Admit impediments. Love is not love
Which alters when it alteration finds,
Or bends with the remover to remove:


O no! it is an ever-fixed mark
That looks on tempests and is never shaken;
It is the star to every wandering bark,
Whose worth's unknown, although his height be taken.


Love's not Time's fool, though rosy lips and cheeks
Within his bending sickle's compass come:
Love alters not with his brief hours and weeks,
But bears it out even to the edge of doom.


   If this be error and upon me proved,
   I never writ, nor no man ever loved. 


                                                    - shakespeare