ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Wednesday 23 November 2011

ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು.... / Ninnolumeyindale baalu belakaagiralu

ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೆ.
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ.

ನಿನ್ನ ಕಿರುನಗೆಯಿಂದ, ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ.
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇತ್ತ ಕಡೆಗೇನೆ.

                                                            - ಕೆ. ಎಸ್. ನರಸಿಂಹ ಸ್ವಾಮಿ 
--------------------------------------------------------------------------------------------------------

Ninnolumeyindale baalu belakaagiralu

Ninnolumeyindale baalu belakaagiralu
chandramukhi neenenalu tappene?
ninna soujanyave daari neralaagiralu
nitya sukhi neenenalu oppene?

ninna nage malligeya parimalada paatreyali
chelli soosuva amruta neenene.
nanna kanasugalella kaigoluva yaatreyalli
siddhisuva dhanyateyu neenene.

ninna kirunageyinda, nageyinda nudiyinda
ettarada mane nanna badukene.
chandranali chitrisida cheluvinolagudiyinda
gange bandalu itta kadegene.

                                                                    K. S. Narasimha Swamy
 

Monday 21 November 2011

ಮುಂಗಾರಿನ ಅಭಿಷೇಕಕೆ / Mungaarina abhishekake

ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು.
ಧಗೆಯಾರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು.

ಬಾಯಾರಿದ ಬಯಕೆಗಳಲಿ
ಥಳಥಳಿಸುವ ನೀರು
ಕಣ್ಣಿಗೆ ಥಣ್ಣಗೆ ಮುತ್ತಿಡುತಿದೆ
ಪ್ರೀತಿಯಂತ ಹಸಿರು.

ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿ ಇಂಪು.
ನಾಳೆಗೆ ನನಸಾಗುವ ಕನಸಿನ
ಹೂವರಳುವ ಕಂಪು.

ಭರವಸೆಗಳ ಹೊಲಗಳಲ್ಲಿ
ನೇಗಿಲ ಗೆರೆ ಕವನ.
ಶ್ರಾವಣದಲಿ ತೆನೆದೂಗುವ
ಜೀವೋತ್ಸವ ಗಾನ.
--------------------------------------------------------------------------------------------------------

Mungaarina abhishekake

Mungaarina abhishekake
miduvaayitu nelavu
dhageyaarida hrudayadalli
putidedditu cheluvu

baayaarida bayakegalali
thalatalisuva neeru
kannige thannage muttidutide
preetiyantha hasiru

maimanagala kombeyalli
hommuva dani impu
naalege nanasaaguva kanasina
hoovaraluva kampu

bharavasegala holagalalli
negila gere kavana
sharaavanadali tenedooguva
jeevotsava gaana.


Saturday 19 November 2011

ಬೆಳಗು (ಮೂಡಲ ಮನೆಯಾ ಮುತ್ತಿನ ನೀರಿನ) / Moodala maneya muttina neerina


ಮೂಡಲ ಮನೆಯಾ ಮುತ್ತಿನ ನೀರಿನ
ಎರಕSವ ಹೊಯ್ದಾ
ನುಣ್ಣ-ನ್ನೆರಕSವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ.
ಹೋಯ್ತೋ-ಜಗವೆಲ್ಲಾ ತೊಯ್ದಾ


ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.


ಎಲೆಗಳ ಮೇಲೆ ಹೂಗಳ ಒಳಗೆ
ಅಮೃತSದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲS ಮೇಲಿಂ-
ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು.


ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ- ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧ-ಮೈಯೆಲ್ಲಾ ಸವರಿ.


ಗಿಡಗಂಟೆಗಳಾ ಕೊರಳೊಳಗಿಂದ
ಹಕ್ಕಿಗಳ ಹಾಡು
ಹೊರಟಿತು-ಹಕ್ಕಿಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.


ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.


ಅರಿಯದು ಅಳವು ತಿಳಿಯದು ಮನವು
ಕಾಣSದೋ ಬಣ್ಣಾ
ಕಣ್ಣಿಗೆ-ಕಾಣSದೋ ಬಣ್ಣಾ.
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.         
                                                      - ಅಂಬಿಕಾತನಯದತ್ತ (ದ. ರಾ. ಬೇಂದ್ರೆ)*


* ವರಕವಿಯ "ಗರಿ" ಕವನಸಂಕಲನದಿ೦ದಾಯ್ದ ಹೊನ್ನ ಗರಿ.                   

Tuesday 15 November 2011

ದೋಣಿಸಾಗಲಿ ಮುಂದೆ ಹೋಗಲಿ / Doni sagali munde hogali

ದೋಣಿಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸಿರುಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿರೆ

ದೂರಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರಜೀವರು ನಮ್ಮಜೀವನ ಲೀಲೆಗೆ
ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ

                                                               - ಕುವೆಂಪು
--------------------------------------------------------------------------------------------------------

Doni saagali munde hogali 

Doni saagali munde hogali doora teerava serali
beesugaalige beeluteluva tereya megade haarali

honnagindiyahididu kaiyolu hemavaariya chimukisi
meghamaalege bannaveeyuta yakshalokava virachisi
nodi moodanadaa digantadi mooduvennina maisiri
ranjisuttide cheluveyaakege suprabhaatava bayasiri

kereya anchinamele minchina hanigalandadi himamani
minchutirpavu moodutaitare baalakomala dinamani
hasirujolada holada gaaliyu teedi tannage barutire
hudugi haaduva mattakokila madhuravaaniya tarutire

doorabettadamele teluva biliya modava nodiri
adane holuta ante teluta doniyaatavanaadiri
naavu leelaamatrajeevaru nammajeevana leelege
nenne nennege indu indige irali naaleyu naalege 

                                                               - KUVEMPU       

Saturday 12 November 2011

ಎದೆಯು ಮರಳಿ ತೊಳಲುತಿದೆ / Edeyu marali tolalutide

ಎದೆಯು ಮರಳಿ ತೊಳಲುತಿದೆ,
ದೊರೆಯದುದನೆ ಹುಡುಕುತಿದೆ,
ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ,
ತನ್ನ ಕುಡಿಯನು..

ಸಿಗಲಾರದ ಆಸರಕೆ,
ಕಾದ ಕಾವ ಬೇಸರಕೆ,
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು..

ಅದಕು ಇದಕು ಅಂಗಲಾಚಿ,
ತನ್ನೊಲವಿಗೆ ತಾನೇ ನಾಚಿ,
ದಡವ ಮುಟ್ಟಿ ಮುಟ್ಟದೊಲು,
ಹಿಂದೆಗೆಯುವ ವೀಚಿ ವೀಚಿ,
ಮುರುಟತಲಿದೆ ಮನದಲಿ.

ನೀರದಗಳ ದೂರತೀರ,
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯ ಭಾರ,
ತಾಳಲೆಂತು ನಾ...

ಯಾವ ಬಲವು, ಯಾವ ಒಲವು,
ಕಾಯಬೇಕು ಅದರ ಹೊಳವು.
ಕಾಣದೆ ದಳ್ಳಿಸಲು ಮನವು,
ಬಾಳಲೆಂತು ನಾ...
                                                 - ಎಂ. ಗೋಪಾಲಕೃಷ್ಣ ಅಡಿಗ
--------------------------------------------------------------------------------------------------------

Edeyu marali tolalutide


Edeyu marali tolalutide,
doreyadudane hudukutide
atta itta dikkugettu balli baalu chaachutide
tanna kudiyanu

sigalaarada aa sarake
kaada kaava besarake
miduki dudukalelasutide
tanna gadiyanu.

adaku idaku angalaachi
tannolavige taane naachi
dadava mutti muttadolu
hindegeyuva veechi veechi
murutatalide manadali.

neeradagala doora teera,
kareyutalide edeya neera,
meerutalide hrudaya bhaara,
taalalentu naa..

yaava balavu, yaava olavu,
kaayabeku adara holavu,
kaanade dallisalu manavu,
baalalentu naa..

                                                           - M. Gopalakrishna Adiga

Monday 7 November 2011

ಲೋಕದ ಕಣ್ಣಿಗೆ ರಾಧೆಯು ಕೂಡ... / Lokada kannige radheyu kooda

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ,
ಭಾವಿಸಿ ಸೇರಲು ಬೃಂದಾವನವ,
ರಾಧೆ ತೋರುವಳು ದಾರಿ.

ಮಹಾಪ್ರವಾಹ, ತಡೆಯುವರಿಲ್ಲ,
ಪಾತ್ರವಿರದ ತೊರೆ ಪ್ರೀತಿ.
ತೊರೆದರು ತನ್ನ, ತೊರೆಯದು ಪ್ರಿಯನ,
ರಾಧೆಯ ಪ್ರೀತಿಯ ರೀತಿ, ಇದು
ರಾಧೆಯ ಪ್ರೀತಿಯ ರೀತಿ. 

                                          - ಹೆಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------------------------------------------------------
Lokada kannige raadheyu kooda 

Lokada kannige raadheyu kooda
ellarante ondu hennu.
nanago aake krishnana toruva
preetiyu needida kannu.

tingala raatri toreya sameepa
uridare yaavudo deepa,
yaaro mohana, yaava radhego,
padutiruvanu paritaapa.

naanu nannadu nannavarennuva
halavu todakugala meeri,
bhaavisi seralu brundaavanava
radhe toruvalu daari.

mahaapravaaha, tadeyuvarilla
paatravirada tore preeti
toredaru tanna toreyadu priyana
raadheya preetiya reeti, idu
raadheya preetiya reeti

                                             - H.S. Venkatesha Murthy

Thursday 3 November 2011

ಕಾಣದ ಕಡಲಿಗೆ ಹಂಬಲಿಸಿದೆ ಮನ.... / kaanada kadalige

ಕಾಣದ ಕಡಲಿಗೆ ಹಂಬಲಿಸಿದೆ ಮನ....
ಕಾಣಬಲ್ಲೆನೆ ಒಂದು ದಿನ?
ಕಡಲನು ಕೂಡಬಲ್ಲೆನೆ ಒಂದು ದಿನ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ.
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ.
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ,
ಕಡಲನು ಕೂಡಬಲ್ಲೆನೆ ಒಂದು ದಿನ?

ಸಾವಿರ ನದಿಗಳು ತುಂಬಿ ಹರಿದರೂ,
ಒಂದೇ ಸಮನಾಗಿಹುದಂತೆ.
ಸುನೀಲ, ವಿಸ್ತರ, ತರಂಗಶೋಭಿತ,
ಗಂಭೀರಾಂಬುಧಿ ತಾನಂತೆ.
ಮುನ್ನೀರಂತೆ, ಅಪಾರವಂತೆ.
ಕಾಣಬಲ್ಲೆನೆ ಒಂದು ದಿನ?
ಅದರೊಳು ಕರಗಲಾರೆನೆ ಒಂದು ದಿನ?

ಜಟಿಲ ಕಾನನದ ಕುಟಿಲ ಪಥಗಳಲಿ 
ಹರಿವ ತೊರೆಯು ನಾನು.
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು?
ಸೇರಬಹುದೇ ನಾನು?
ಕಡಲ ನೀಲಿಯೊಳು ಕರಗಬಹುದೇ ನಾನು?
--------------------------------------------------------------------------------------------------------

Kaanada kadalige hambaliside mana

Kaanada kadalige hambaliside mana
kaanaballene ondu dina?
kadalanu koodaballene ondu dina?

kaanada kadalina moretada jogula,
olagivigindu kelutide.
nanna kalpaneyu tanna kadalane,
chitrisi chintisi suyyutide.
elliruvudo adu, entiruvudo adu.
nodaballene ondu dina ?
kadalanu koodaballene ondu dina?

saavira holegalu tumbi haridaru,
onde samanaagihudante.
suneela vistara taranga shobhita,
gambheeraambhudhi taanante.
munneerante, apaaravante.
kaanaballene ondu dina?
adarolu karagalaarene ondu dina?

jatila kaananada kutila pathagalali
hariva toreyu naanu.
endigaadaru kaanada kadalanu
seraballenenu?
serabahude naanu ?
kadala neeliyolu karagabahude naanu?

Tuesday 1 November 2011

ದೀಪವು ನಿನ್ನದೇ, ಗಾಳಿಯು ನಿನ್ನದೇ / Deepavu ninnade Galiyu ninnade

ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.

ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ.

ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ.

ಅಲ್ಲಿ ರಣದುಂಧುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ.
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ.
                                              - ಕೆ. ಎಸ್. ನರಸಿಂಹ ಸ್ವಾಮಿ 

--------------------------------------------------------------------------------------------------------

Deepavu ninnade, gaaliyu ninnade

deepavu ninnade, gaaliyu ninnade
aaradirali belaku.
kadalu ninnade, hadagu ninnade
mulugadirali baduku.

bettavu ninnade, bayalu ninnade
habbi nagali preeti.
nelalo, bisilo ellavu ninnade
irali ekareeti.

agondu sidilu, eegondu mugilu
ninage alankaara.
allondu hakki, illondu mugulu
ninage namaskaara.

alli ranadundhubhi, illondu veene
ninna pratidhvani.
aa mahaakaavya, ee bhaavageete
ninna padadhvani.

                                               K. S. Narasimha Swamy