ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Sunday, 31 July 2011

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ / Ee banu Ee chukki

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ 
ತೇಲಿ ಸಾಗುವ ಮುಗಿಲು ಹರುಷ ಉಕ್ಕಿ 
ಯಾರು ಇಟ್ಟರು ಇದನು ಹೀಗೆ ಇಲ್ಲಿ 
ತುದಿ ಮೊದಲು ತಿಳಿಯದೀ ನೀಲಿಯಲಿ || ಪ ||

ಒಂದೊಂದು ಹೂವಿಗೂ ಒಂದೊಂದು ಬಣ್ಣ 
ಒಂದೊಂದು ಜೀವಕು ಒಂದೊಂದು ಕಣ್ಣ 
ಯಾವುದೋ ಬಗೆಯಲ್ಲಿ ಎಲ್ಲರಿಗು ಅನ್ನ
ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ || ೧ ||

ನೂರಾರು ನದಿ ಕುಡಿದು ಮೀರದ ಕಡಲು 
ಭೋರೆಂದು ಸುರಿಸುರಿದು ಆರದ ಮುಗಿಲು 
ಸೇರಿಯೂ ಕೋಟಿ ತಾರೆ ತುಂಬದಾ ಬಯಲು 
ಯಾರದೀ ಮಾಯೆ ಯಾವ ಬಿಂಬದಾ ನೆರಳು || ೨ ||

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ 
ಹುಡುಕಿದರೆ ಕೀಲಿಕೈ ಸಿಗದೇ ಎದೆಯೊಳಗೆ 
ತಿಳಿಯದೆ ಅದರಲ್ಲಿ ಕುಳಿತಿರುವೆ ನೀನೆ 
ಎನ್ನುವರು ನನಗೀಗ ಸೋಜಿಗವು ನಾನೇ ||೩ ||

                                                                 - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಕಾಂತನಿಲ್ಲದ ಮ್ಯಾಲೆ ಎಕಾಂತವ್ಯಾತಕೆ / Kantanillada Myaale Ekantavyatake

ಕಾಂತನಿಲ್ಲದ ಮ್ಯಾಲೆ ಎಕಾಂತವ್ಯಾತಕೆ 
ಗಂಧಲೇಪನವ್ಯಾತಕೆ ಈ ದೇಹಕೆ ||

ಮಂದಮಾರುತ ಮೈಗೆ ಬಿಸಿಯಾದರೆ ತಾಯಿ 
ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ.
ಹೂ ಜಾಜಿ ಸೂಜಿಯ ಹಾಗೆ ಚುಚ್ಚುತಲಿವೆ.
ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ 
ಉಸಿರಿನ ಬಿಸಿಯವಗೆ ತಾಗದೆ ಹುಸಿಹೋಯ್ತೆ,
ಚೆಲುವ ಬಾರದಿರೇನು ಫಲವೇ ಈ ಚೆಲುವಿಗೆ.

ಕಾಮನ ಬಾಣ ಹತ್ಯಾವ ಬೆನ್ನ 
ಆತುರ ತೀವ್ರ ಕಾಮಾತುರ ತಾಳೆನಾ,
ಆರ್ತಳಿಗೆ ಆಶ್ರಯವಿರದೆ ಒದ್ದಾಡುವೆ.

ಅನ್ಯ ಪುರುಷರು ಮಾರ ಅಂಗನೆಯನೆಳೆದರೆ 
ಕೈ ಹಿಡಿದ ಸರಿ ಪುರುಷ ಸುಮ್ಮನಿರತಾರೆನೆ,
ಕರುಣೆಯ ತೋರುವರ್ಯಾರೆ ಸಣ್ಣವಳಿಗೆ.

                                                                                       - ಪ್ರೊ. ಚಂದ್ರಶೇಖರ ಕಂಬಾರ

Sunday, 24 July 2011

ತೂಗುಮಂಚ / Tugumancha

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು |
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ 
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು ||

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ 
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು |
ಸೆರಗು ಜಾರುತಿರಲು ಕೆಳಗೆ ಬಾನುಭೂಮಿ ಮೇಲು ಕೆಳಗೆ 
ಅದುರುತಿರುವ ಅಧರಗಳಿಗೆ ಬೆಳ್ಳಿಹಾಲ ಬಟ್ಟಲು ||

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು 
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೆಲಿತೋ 
ತನಗೆ ತಾನೇ ತೂಗುಮಂಚ ತಾಗುತಿತ್ತು ದೂರದಂಚ 
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ

Download This Song

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ / Mugila maarige Raga ratiya

ರಚನೆ ; ದ. ರಾ. ಬೇಂದ್ರೆ.


ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ 
ಆಗ ಸಂಜೆ ಆಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ 
ಗಾಳಿಗೆ ಮೇಲಕ್ಕೆದ್ದಿತ್ತ .

ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ; 
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ 
ಸೂಸ್ಯಾವ ಚಿಕ್ಕಿ ಅತ್ತಿತ್ತ.

೩ 
ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ 
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ  ಭಾ0ವೀ ಹಾದಿ ಕಾಲಾಗಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ.


ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ

Sunday, 3 July 2011

ಶಾನುಭೋಗರ ಮಗಳು / Shanubhogara Magalu

ರಚನೆ - ಕೆ. ಎಸ್. ನರಸಿಂಹ ಸ್ವಾಮಿ  

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ 
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮದುವೆಯಿಲ್ಲ || ಪ ||

ತಾಯಿಯಿಲ್ಲದ ಹೆಣ್ಣು ಮಿಂಚಬೀರುವ ಕಣ್ಣು ಒಮ್ಮೊಮ್ಮೆ ಕಣ್ಣೀರ ಸರಸಿಯಹುದು 
ತಾಯಿಯಂದದಿ ಬಂದು ತಂಪನೆರೆಯುವುದೆಂದು ಇಂಥ ಬಾಳಿಗೆ ಒಲವೆ ನಿನ್ನ ಕನಸು |
ಹತ್ತಿರದ ಕೆರೆಯಿಂದ ತೊಳೆದಬಿ೦ದಿಗೆಯೊಳಗೆ ನೀರ ತರುವಾಗವಳ ನೋಡಬೇಕು 
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ ಅವಳ ಗಂಡನ ಹೆಸರ ಕೇಳಬೇಕು || ೧ ||

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ಒಲ್ಲೆನೆಂದಳು ಸೀತೆ ಕೋಣೆಯೊಳಗೆ |
ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ ತೆರಳಿದನು ಜೋಯಿಸನು ತಣ್ಣಗಾಗಿ || ೨ ||

ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರಕೇರಿಯಲಿ ಬಂದಿದ್ದ ಹೊಸ ಗಂಡು ತನ್ನ ಕೂದಲಿಗಿಂತ ಕಪ್ಪು ಎಂದು |
ನಮ್ಮೂರಿನಕ್ಕರೆಯ ಸಕ್ಕರೆಯ ಬೊ೦ಬೆಯನು ನೋಡಬೇಕೆ ಇಂಥ ಕಪ್ಪುಗಂಡು 
ಶಾನುಭೋಗರ ಮನೆಯ ತೋರಣವೆ ಹೇಳುವುದು ಬಂದ ದಾರಿಗೆ ಸುಂಕವಿಲ್ಲವೆಂದು || ೩ ||

ಶಾನುಭೋಗರ ಮಗಳು ರತ್ನದಂತಹ ಹುಡುಗಿ ಗಂಡುಸಿಕ್ಕುವುದೊಂದು ಕಷ್ಟವಲ್ಲ 
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೆನಂತೆ ನಷ್ಟವಿಲ್ಲ ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ / Ondu Munjaavinali

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ 
ಸೋ__ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು 
ಅದಕೆ ಹಿಮ್ಮೇಳವೆನೆ ಸೋಸಿಪಹ ಸುಳಿಗಾಳಿ 
ತೆಂಗುಗರಿಗಳ ನಡುವೆ ನುಸುಳುತಿತ್ತು || ಒಂದು ಮುಂಜಾವಿನಲಿ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ 
ಹೂ ಮುಡಿದು ಮದುಮಗಳ ಹೋಲುತಿತ್ತು 
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ 
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು || ಒಂದು ಮುಂಜಾವಿನಲಿ ||

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು 
ಸೊಡರಿನಲಿ ಆರತಿಯ ಬೆಳಗುತ್ತಿತ್ತು 
ಕೊರಳುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ 
ಶುಭಮಸ್ತು  ಶುಭಮಸ್ತು ಎನ್ನುತ್ತಿತ್ತು || ಒಂದು ಮುಂಜಾವಿನಲಿ ||

ತಳಿರತೋರಣದಲ್ಲಿ  ಬಳ್ಳಿಮಾಡಗಳಲ್ಲಿ 
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು 
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ 
ಚಿಟ್ಟೆ ರಿಂಗಣಗುಣಿತ ಹಾಕುತಿತ್ತು || ಒಂದು ಮುಂಜಾವಿನಲಿ ||

ಉಷೆಯ ನುಣ್ಗದಪಿನಲಿ ಹರ್ಷ ಬಾಷ್ಪಗಳಂತೆ 
ಮರದ ಹನಿ ತಟಪಟನೆ ಉದುರುತಿತ್ತು 
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದಮನ 
ಮುಂಬಾಳ ಸವಿಗನಸ ನೆನೆಯುತಿತ್ತು || ಒಂದು ಮುಂಜಾವಿನಲಿ ||


ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ 
ಸೋ__ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ___ ||

                                                                                            - ಚೆನ್ನವೀರ ಕಣವಿ

Download This Song

Saturday, 2 July 2011

ಮೊದಲ ದಿನ ಮೌನ / Modala Dina Mouna

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ || ಮೊದಲ ದಿನ ಮೌನ ||

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ || ಮೊದಲ ದಿನ ಮೌನ ||

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂತಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ || ಮೊದಲ ದಿನ ಮೌನ ||

                                                                                     - ಕೆ. ಎಸ್. ನರಸಿಂಹ ಸ್ವಾಮಿ 

ಸ್ತ್ರೀ ಎಂದರೆ ಅಷ್ಟೇ ಸಾಕೆ ! / Stree Endare Aste Saake

ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ 
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ 
ಸ್ತ್ರೀ ಎಂದರೆ ಅಷ್ಟೇ ಸಾಕೆ || ಪ ||

ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ 
ಬಯಲ ಹಸಿರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ೧ ||

ಮರಗಿಡ ಹೂ ಮುಂಗುರುಳನು ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ ನಿನಗೆ ಬೇರೆ ಹೆಸರು ಬೇಕೇ 
ಸ್ತ್ರೀ ಎಂದರೆ ಅಷ್ಟೇ ಸಾಕೆ || ೨ ||

ಮನೆಮನೆಯಲಿ ದೀಪ ಉರಿಸಿ ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ೩ ||

                                                                                        - ಜಿ. ಎಸ್. ಶಿವರುದ್ರಪ್ಪ

ಹಿಂದ ನೋಡದ / Hinda Nodada

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!    

ಗಾಳಿ ಹೆಜ್ಜಿ  ಹಿಡದ ಸುಗಂಧ ಅತ್ತ ಅತ್ತ ಹೋಗುವಂದ (೨)
ಹೋತ ಮನಸು ಅವನ ಹಿಂದ ಹಿಂದ ನೋಡದ ಗೆಳತಿ ಹಿಂದ ನೋಡದ ||

ನಂದ ನನಗ ಎಚ್ಚರಿಲ್ಲ ಮಂದಿಗೊಡವಿ ಏನ ನನಗ (೨)
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತಿ ಹಿಂದ ನೋಡದ ||

ಸೂಜಿ ಹಿಂದ ದಾರದ್ಹಾಂಗ ಕೊಳ್ಳದೊಳಗ ಜಾರಿದ್ಹಾಂಗ (೨)
ಹೋತ ಹಿಂದ ಬಾರದ್ಹಾಂಗ ಹಿಂದ ನೋಡದ ಗೆಳತಿ ಹಿಂದ ನೋಡದ ||

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!

                                                                          - ಅಂಬಿಕಾತನಯದತ್ತ  (ದ. ರಾ. ಬೇಂದ್ರೆ )