ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Sunday, 21 December 2014

ಕೊಲ್ಲುವುದಾದರೆ ಕೊಂದುಬಿಡು / kolluvudaadare kondubidu

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ.

ದುಂದಿಯು ಧಗ ಧಗ ಧಗ ಉರಿದಂತೆ
ಅಂದು ನಿನ್ನ ಪ್ರೀತಿ
ಹೆಪ್ಪುಗಟ್ಟಿರುವ ಹಿಮದಂತೆ
ಇಂದು ನಿನ್ನ ರೀತಿ.

ಕಾಳಾಗದೆ ನಿನ್ನಾಳದ ಪ್ರೀತಿ
ಆಯಿತೇ ಬರೀ ಜೊಳ್ಳು ಹೇಳು
ಪ್ರೀತಿಯ ಸೇತುವೆಯಂತೆ ತೋರಿ
ಮರೆಯಾಯಿತೆ ಮಳೆಬಿಲ್ಲು.

ಇನ್ನೂ ಏಕೀ ಮುಚ್ಹುಮರೆ
ತೆರೆಗಳ ನೀ ಸರಿಸು
ತೊರೆಯುವುದಾದರೆ ತೊರೆದುಬಿಡು
ಇಲ್ಲವೇ ಸ್ವೀಕರಿಸು.

                                            -  ಬಿ ಆರ್ ಲಕ್ಷ್ಮಣರಾವ್

Wednesday, 12 November 2014

ಯಾಕೆ ಕಾಡುತಿದೆ ಸುಮ್ಮನೆ ನನ್ನನು / Yake Kadutide Summane Nannanu

ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ

ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ

ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ

                                        - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಮರೆಗೆ ನಿಂತು ಕಾಯುತಿರುವ / Marege Nintu Kayutiruva

ಮರೆಗೆ ನಿಂತು ಕಾಯುತಿರುವ ಕರುಳು ಯಾವುದು
ಸಾವಿರ ಸೋಜಿಗವ ತೆರೆವ ಬೆರಳು ಯಾವುದು

ಸುತ್ತ ಹೊಳೆವ ಹಸಿರಲಿ
ಮತ್ತೆ ಪಕ್ಷಿ ದನಿಯಲಿ
ಎತ್ತೆತ್ತಲು ಅಲೆದು ಬಂದು
ಮಳೆ ಚೆಲ್ಲುವ ಮುಗಿಲಲಿ

ಕಣ್ಣ ಕೊಟ್ಟು ಹಗಲಿಗೆ
ಕಪ್ಪನಿಟ್ಟು ಇರುಳಿಗೆ
ಇನ್ನಿಲ್ಲದ ಬಣ್ಣ ಬಳಿದು
ಚಿಟ್ಟೆಯಂತ ಮರುಳಿಗೆ

ಹೊರಗೆ ನಿಂತು ದುಡಿಯುವ
ಫಲ ಬಯಸದೆ ಸಲಹುವ
ತಾಯಿ ಜೀವವೆ ನಮೋ
ಕಾಯ್ವ ಕರುಣೆಯೇ ನಮೋ

                                    – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Sunday, 2 November 2014

ಹೊತ್ತಿತೋ ಹೊತ್ತಿತು ಕನ್ನಡದ ದೀಪ / Hottito hottitu kannadada deepa

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ


ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ

                                            - ಡಾ.ಸಿದ್ದಯ್ಯ ಪುರಾಣಿಕ

Sunday, 4 May 2014

ಕಟ್ಟುವೆವು ನಾವು / Kattuvevu Naavu

ಕಟ್ಟುವೆವು ನಾವು ಹೊಸ ನಾಡೊಂದನು, - ರಸದ
                                              ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

                      ನಮ್ಮೆದೆಯ ಕನಸುಗಳೇ ಕಾಮಧೇನು
                      ಆದಾವು, ಕರೆದಾವು ವಾ೦ಛಿತವನು;
                      ಕರೆವ ಕೈಗಿಹುದೋ ಕನಸುಗಳ ಹರಕೆ;
                      ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

                      ನಾವು ಹಿಂದೆಗೆವೆವೇ? ವೀರ ತರುಣರು ನಾವು!
                      ಒಂದೆ ನೆಗೆತಕೆ ನೆಗೆವೆವೋ ಕಂದಕವನು,
                      ಕುಟ್ಟಿ ಪುಡಿಮಾಡುವೆವು ಕೋಟೆಗಳನು,
                      ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

                      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
                      ನೈರಾಶ್ಯದಗ್ನಿಮುಖದಲ್ಲು ಕೂಡ
                      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
                      ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

                      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
                      ಸಮಬಗೆಯ ಸಮಸುಖದ ಸಮದುಃಖದ
                      ಸಾಮರಸ್ಯದ ಸಾಮಗಾನಲಹರಿಯ ಮೇಲೆ
                      ತೇಲಿ ಬರಲಿದೆ ನೋಡು, ನಮ್ಮ ನಾಡು!

ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು!

                      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
                      ಯುವಜನದ ನಾಡ ಗುಡಿಯು;
                      ಅದರ ಹಾರಾಟಕ್ಕೆ ಬಾನೆ ಗಡಿಯು,
                      ಬರಲು ಬಿಡೆವೆಂದಿಗೂ ಅದಕೆ ತಡೆಯು!
                      ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
                      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
                      ಕೊಟ್ಟೆವಿದೋ ವೀಳೆಯವನು;
                      ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
                      ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
                                                                     ಬೀಡೊಂದನು

                                                            - ಮೊಗೇರಿ ಗೋಪಾಲಕೃಷ್ಣ ಅಡಿಗ