ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Tuesday, 28 February 2012

ಸುಡು ಬಯಲ ಗಾಳಿ ನಾನು / Sudu bayala gaali naadu

ಸುಡು ಬಯಲ ಗಾಳಿ ನಾನು
ಸುಳಿಯೇ ಪರಿಮಳವೇ ನೀನು
ಕೊರಗಿ ಮರುಗುತಲಿರುವ
ಕರುಕು ಬಿರುಕಿನ ನೆಲಕೆ
ಸುರಿಯೆ ಮಳೆಯಾಗಿ ನೀನು ||

ಯಾರು ನೆಟ್ಟರು ಇಲ್ಲಿ
ಮುಳ್ಳು ಲೋಹದ ಬಳ್ಳಿ
ಬೇರುಗಳು ಬರಲು ಬರಲು
ದೂರ ಗಗನದ ನಾಡು
ಖಾಲಿ ನೀಲಿಯ ಜಾಡು
ತೋರೆ ಕಾರ್ಮುಗಿಲ ಕುರುಳು ||

ಸಾಕು ಯಾತನೆ ಚಿಂತೆ
ಲೋಕಗಳು ನನ್ನಂತೆ
ದೇಕುತಿವೆ ನಿನ್ನ ಕಡೆಗೆ
ಕರೆಯೇ ಜೀವದ ಗೋವು
ಮೆರೆಯೇ ಗೋಕುಲವನ್ನು
ಬೇಕು ನಂದನ ಇಳೆಗೆ ||

                                    - ಹೆಚ್. ಎಸ್. ಶಿವಪ್ರಕಾಶ್            

Friday, 24 February 2012

ಎಲ್ಲೋ ಹುಡುಕಿದೆ ಇಲ್ಲದ ದೇವರ / ello hudukide illada devara

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ ||

ಎಲ್ಲಿದೆ ನಂದನ, ಎಲ್ಲಿದೆ ಬಂಧನ
ಎಲ್ಲಾ ಇದೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಿಗೆಗೆ ||

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕುದಿನದ ಈ ಬದುಕಿನಲಿ ||

                                        - ಜಿ. ಎಸ್. ಶಿವರುದ್ರಪ್ಪ          

Saturday, 18 February 2012

ಪ್ರೀತಿಯ ಕರೆ ಕೇಳಿ.... ದೀಪ ಹಚ್ಚ / Preetiya kare keli

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ ||
ನಲ್ಲ ನೀ ಬಂದಂದು, ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ ||

ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ ದೀಪ ಹಚ್ಚ ||

ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತ್ತು
ಹೊಸಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ ದೀಪ ಹಚ್ಚ ||

ವಿಶ್ವಮೋಹಿತ ಚರಣ ವಿವಿಧ ವಿಶ್ವಾಭರಣ 
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಹೇಳಲೀ ದೀಪ ಹಚ್ಚ ||

ನನ್ನಂತರಂಗದಿ ನಂದದೆ ನಿಂದಿಪ
ನಂದಾದೀಪವಾಗಿರಲೀ ದೀಪ ಹಚ್ಚ ||


                                                  - ಎಸ್. ವಿ. ಪರಮೇಶ್ವರ ಭಟ್ಟ     

Monday, 13 February 2012

ಬಾರೆ ನನ್ನ ದೀಪಿಕಾ / Baare nanna deepika

ಬಾರೆ ನನ್ನ ದೀಪಿಕಾ
ಮಧುರ ಕಾವ್ಯ ರೂಪಕ,
ಕಣ್ಣ ಮುಂದೆ ಸುಳಿಯೆ ನೀನು,
ಕಾಲದಾ ತೆರೆ ಸರಿದು ತಾನು,
ಜನುಮ ಜನುಮ ಜ್ಞಾಪಕ.

ನಿನ್ನ ಬೊಗಸೆಗಣ್ಣಿಗೆ,
ಕೆನ್ನೆ ಜೇನು ದೊನ್ನೆಗೆ,
ಸಮ ಯಾವುದೇ ಚೆನ್ನೆ ನಿನ್ನ
ಜಡೆ ಹರಡಿದ ಬೆನ್ನಿಗೆ?

ನಿನ್ನ ಕನಸು ಬಾಳಿಗೆ,
ಧೂಪದಂತೆ ಗಾಳಿಗೆ,
ಬೀಸಿ ಬರಲು ಜೀವ ಹಿಗ್ಗಿ,
ವಶವಾಯಿತೆ ದಾಳಿಗೆ.

ಮುಗಿಲ ಮಾಲೆ ನಭದಲಿ,
ಹಾಲು ಪೈರು ಹೊಲದಲಿ,
ರೂಪಿಸುತಿದೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ.

                                       - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ 

Saturday, 4 February 2012

ಏನ ಬೇಡಲಿ ? / Ena bedali?

ದೇವ, ನಿನ್ನ ಮಾಯೆಗಂಜಿ
     ನಡುಗಿ ಬಾಡೆನು;
ನಿನ್ನ ಇಚ್ಛೆಯಂತೆ ನಡೆವ -
     ನಡ್ಡಿ ಮಾಡೆನು.

ಮುಕ್ತಿ! ಮುಕ್ತಿ! - ನನ್ನ ನಾನು.
     ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
     ಅಡಗಿಕೊಳ್ವುದೋ?

ಶಕ್ತಿಯಿತ್ತೆ ಮುಕ್ತಿಯನ್ನು
     ಗಳಿಸಿ ಕೊಳ್ಳಲು ;
ನೀರನೆರೆದೆ ಬಳ್ಳಿಯನ್ನು
     ಬೆಳಸಿಕೊಳ್ಳಲು ;

ಜ್ಞಾನರವಿಯನಿತ್ತೆ ಎದೆಯ
     ನೋಡಿಕೊಳ್ಳಲು;
ಗೀತೆಯನ್ನು ಕೊಟ್ಟೆ ಕೊಳಲೊ-
     ಳೂದಿಕೊಳ್ಳಲು.

ಎಲ್ಲವನ್ನು ಕೊಟ್ಟಿರುವೆ ;
     ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
     ಏಕೆ ಕಾಡಲಿ !

                                   - ಕೆ. ಎಸ್. ನರಸಿಂಹ ಸ್ವಾಮಿ