ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Sunday, 29 April 2012

ನಾರೀ ನಿನ್ನ ಮಾರೀ ಮ್ಯಾಗ / naari ninna maari myaaga

ನಾರೀ ನಿನ್ನ ಮಾರೀ ಮ್ಯಾಗ 
ನಗೀ ನವಿಲು ಆಡತಿತ್ತ
ಆಡತಿತ್ತ ಓಡತಿತ್ತ 
ಮುಗಿಲ ಕಡೆಗೆ ನೋಡತಿತ್ತ |

                    ಮಿಣ ಮಿಣ ಮಿಣ ಮಿಂಚತಿತ್ತ
                    ಮೂಡತಿತ್ತ ಮುಳುಗತಿತ್ತ
                    ಮುಳುಗತಿತ್ತ ತೊಳಗತಿತ್ತ
                    ನೆಲ ಜಲ ಬೆಳಗತಿತ್ತ |

ಕಣ್ಣಿನ್ಯಾಗ ಬಣ್ಣದ ನೋಟ
ತಕತಕ ಕುಣಿದಾಡತಿತ್ತ
ಕುಣಿತಿತ್ತ ಮಣಿತಿತ್ತ
ಒನಪಿನಲೆ ಒನದಾಡತಿತ್ತ |

                    ಮನದ ಮಾಮರದ ಕೋಣಿಗೆ
                    ಕೋಕಿಲೊಂದು ಕೂಡತಿತ್ತ
                    ಕೂಡತಿತ್ತ ಹಾಡಬಿಟ್ಟು
                    ಬರೇ ನಿನ್ನ ನೋಡತಿತ್ತ |

ಒಂದು ಜೀವ ನೊಂದುಕೊಂಡು
ಹಗಲಿರುಳು ಮಿಡುಕಾಡುತಿತ್ತ
ಮಿಡುಕುತಿತ್ತ ತೊಡಕತಿತ್ತ
ಏನೋ ಒಂದ ಹುಡುಕತಿತ್ತ |

                    ಕಣ್ಣೀರಿನ ಮಳೆಯ ಕೂಡ
                    ತನ್ನ ದುಃಖ ತೋಡತಿತ್ತ
                    ತೋಡತಿತ್ತ ಬೇಡತಿತ್ತ
                    ದೊರಕದ್ದಕ್ಕ ಬಾಡತಿತ್ತ

                                                               - ಅಂಬಿಕಾತನಯ ದತ್ತ

Thursday, 19 April 2012

ಹೂವು ಹೊರಳುವುವು ಸೂರ್ಯನ ಕಡೆಗೆ / Hoovu horaluvuvu sooryana kadege

ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ, ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ.

                  ಜಗದ ಮೂಸೆಯಲಿ ಕರಗಿಸಿ ಬಿಡುವನು
                  ಎಲ್ಲ ಬಗೆಯ ಸರಕು;
                  ಅದಕೆ ಅದರ ಗುಣದೋಷಗಳ೦ಟಿಸಿ
                  ಬಿಡಿಸಿ ಬಿಟ್ಟ ತೊಡಕು.

ಗಿಡದಿಂದುರುವ ಎಲೆಗಳಿಗೂ ಮುದ,
ಚಿಗುರುವಾಗಲೂ ಒಂದೇ ಹದ,
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನೋ ಕಲಾವಿದ !

                  ಬಿಸಿಲ ಧಗೆಯ ಬಸಿರಿನಿಂದಲೇ ಸುಳಿವುದು
                  ಮೆಲು ತಂಗಾಳಿಯು ಬಳಿಗೆ;
                  ಸಹಿಸಿಕೊಂಡ ಸಂಕಟವನು ಸೋಸಲು
                  ಬಂದೆ ಬರುವುದಾ ಗಳಿಗೆ.

ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ;
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ.

                                         - ಚೆನ್ನವೀರ ಕಣವಿ  

Friday, 6 April 2012

ಭೃಂಗದ ಬೆನ್ನೇರಿ... / bhrungada benneri

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ ||

              ಏನು ಏನು? ಜೇನು ಜೇನು? ಏನೇ ಗುಂಗುಂ ನಾನಾ
              ಓಂಕಾರದ ಶಂಖನಾದಕ್ಕಿಂತ ಕಿಂಚಿದೂ ನಾ
              ಕವಿಯ ಏಕತಾನ ಕವನದಂತೆ ನಾದಲೀನಾ ||

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವ ರೇಷ್ಮೆ ಬೆರೆಯುವಂತೆ ತಾನೇ ಬಾಲಾ
ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಳಾ ||

              ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
              ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
              ಮೂಡಿ ಮೂಡಿ ಮುಳುಗಿ ಮೊಳಗುವೊಲು ಸ್ವತಂತ್ರಾ ||

ಎಲ್ಲೆಲ್ಲೋ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ರರಂಗ ಭೂಮಾ
ದಾಂಗುಡಿಗಳ ಬಿಡುತ್ತಲಿತ್ತು ಅರಳಲಿತ್ತು ಪ್ರೇಮಾ ||

              ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
              ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
              'ಬಂತೆಲ್ಲಿಗೆ'? ಕೇಳುತಿದ್ದ ನೀಯನಂತ ಕಾಲಾ ||

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಬಿಗ್ಗಲಿತ್ತು ತನ್ನ ತಾನೇ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ ||

              ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸಾ
              ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
              ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ||

                                                                                        - ಅಂಬಿಕಾತನಯದತ್ತ