ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Sunday, 24 June 2012

ಹಿಂದೆ ಹೇಗೆ ಚಿಮ್ಮುತಿತ್ತು!! / Hinde hege chimmutittu

ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ !
ಈಗ ಯಾಕೆ ಜ್ವಲಿಸುತ್ತಿದೆ
ಏನೋ ಶಂಕೆ ಭೀತಿ !

ಜೇನು ಸುರಿಯುತಿತ್ತು ನಿನ್ನ
ದನಿಯ ಧಾರೆಯಲ್ಲಿ,
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ.

ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ ?
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ ?

ಹಮ್ಮು ಬೆಳೆದು ನಮ್ಮ ಬಾಳು
ಆಯ್ತು ಎರಡು ಹೋಳು,
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು.

                                       - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ


Saturday, 16 June 2012

ನೀನು ಮುಗಿಲು ನಾನು ನೆಲ.. / neenu mugilu naanu nela

ನೀನು ಮುಗಿಲು, ನಾನು ನೆಲ.
ನಿನ್ನ ಒಲವೆ ನನ್ನ ಬಲ.
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ.

ನಾನು ಎಳೆವೆ, ನೀನು ಮಣಿವೆ,
ನಾನು ಕರೆವೆ, ನೀನು ಸುರಿವೆ.
ನಮ್ಮಿಬ್ಬರ ಒಲುಮೆ  ನಲುಮೆ ಜಗಕಾಯಿತು ಹುಣ್ಣಿಮೆ.
ನಾನಚಲದ ತುಟಿಯೆತ್ತುವೆ,
ನೀ ಮಳೆಯೊಲು ಮುತ್ತನಿಡುವೆ.
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ.

ಸೂರ್ಯ ಚಂದ್ರ ಚಿಕ್ಕೆಗಣ್ಣ,
ತೆರೆದು ನೀನು ಸುರಿವ ಬಣ್ಣ.
ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ.
ನೀನು ಗಂಡು, ನಾನು ಹೆಣ್ಣು,
ನೀನು ರೆಪ್ಪೆ, ನಾನು ಕಣ್ಣು.
ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ.

                                                                      - ಜಿ. ಎಸ್. ಶಿವರುದ್ರಪ್ಪ.


Sunday, 3 June 2012

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ... / naada deviye kande ninna madilalli

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ;
ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ.
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ!
ಒಂದೇ ನೆಲದ ರಸ ಹೀರಲೇನು? ಸಿಹಿ, ಕಹಿಯ ರುಚಿಯ ಕಾಯಿ,
                                                                   ನಾಡ ದೇವಿಯೇ ...

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರುವ ಮಂದಿ -
ಕಡೆಗಣಿಸುತವರ ನಡೆದಿರುವನೊಬ್ಬ ಸ್ವಹಿತಕ್ಕೆ ಹಿಡಿದು ದೊಂದಿ.
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈ ಹೊತ್ತ ಬಡವನೊಬ್ಬ;
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬ.
                                                                   ನಾಡ ದೇವಿಯೇ ...

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂಡೆ;
ದುಃಖಪೂರ ಉಕ್ಕುಕ್ಕಿ ಮೊರೆಯೆ, ಕೊಚ್ಚಿತ್ತು ಬಾಳ ದಂಡೆ.
ಹೊಟ್ಟೆ ಹೇಳಿಗೆಯ ಬಿಚ್ಚಿ, ಹಸಿವ ಹಾವನ್ನು ಚುಚ್ಚಿ ಕೆಣಕಿ -
ಯುಕ್ತಿ ರಾಗದಲಿ ಕುಣಿಸಿ, ದಣಿಸಿ, ನಲಿದಿಹರು ಹಲರು ಬದುಕಿ.
                                                                   ನಾಡ ದೇವಿಯೇ ...

ನರನನ್ನೆ ಗಾಳವಾಗಿಸುತ ಬಾಳ ನೀರಲ್ಲಿ, ನಲಿವ ನರಿಗೆ -
ನಾವೊಂದು ಎನುವ ಸತ್ಯಕ್ಕೆ ಅಡ್ಡಗಾಲೆಳೆವ ನಾಡಿನರಿಗೆ,
ಎಚ್ಚರವ ನೀಡಿ ತಿದ್ದುತ್ತಲಿರಲಿ ಕವಿ ಭಾವವೆಂಬ ಬಡಿಗೆ,
ತಾಯಿ ಭಾರತಿಯೆ, ಇದುವೇ ನಿನಗೆ ನಾ ಸಲಿಸಲಿರುವ ಕೊಡುಗೆ.
                                                                   ನಾಡ ದೇವಿಯೇ ...

ಗುರಿ ಮುಟ್ಟುತಿರಲಿ ಈ ಜೀವ ತಾನು, ಹಿಡಿದೊಂದು ದಿಟದ ದಾರಿ -
ಮರೆಯದಂತೆ ಹೊರಿಸಿರುವ ಋಣವ, ಕೃತಿಯಲ್ಲಿ ಅದನು ಸಾರಿ.
ನಿನ್ನೊಲವ ತೈಲ ನನ್ನೆದೆಯೊಳಿರಲಿ; ಬೆಳಗಿರಲಿ ಬಾಳ ಬತ್ತಿ.
ಕೊನೆ ಕಾಣಲಮ್ಮ  ಅನುಭವದಿ ಮಾಗಿ, ನಿನ್ನಡಿಗೆ ಬಾಗಿ ನೆತ್ತಿ.
                                                                   ನಾಡ ದೇವಿಯೇ ...

                                                                                          - ಕೆ. ಎಸ್. ನಿಸಾರ್ ಅಹಮದ್

Saturday, 2 June 2012

ಹತ್ತು ವರ್ಷದ ಹಿಂದೆ... / Hattu varshada hinde

ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೇ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈ ಹಿಡಿದವರು ನೀವಲ್ಲವೇ

ಬೆಟ್ಟಗಳಾ ಬೆನ್ನಿನಲಿ ಬೆಟ್ಟಗಳಾ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೇ
ತಿಟ್ಟಿನಲ್ಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತಾ ನಡೆದವರು ನೀವಲ್ಲವೇ

ಬಾಗಿಲಿಗೆ ಬಂದವರು ಬೇಗ ಬಾ ಎಂದವರು
ಬರಬೇಕೆ ಎಂದವರು ನೀವಲ್ಲವೇ
ನೋಡು ಬಾ ಎಂದವರು ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೇ

ಸೆರಗೆಳೆದು ನಿಲ್ಲಿಸಿದವರು, ಜಡೆಯೆಳೆದು ನೋಯಿಸಿದವರು
ಎತ್ತರದ ಮನೆಯವರು ನೀವಲ್ಲವೇ
ನೀನೆ ಬೇಕೆಂದವರು, ನೀನೆ ಸಾಕೆಂದವರು
ಬೆಟ್ಟದಲಿ ನಿಂತವರು ನೀವಲ್ಲವೇ

ಕೈಗೆ ಬಳೆಯೇರದೇ ಅಯ್ಯೋ ನೋವೆಂದಾಗ
ಮಹಡಿಯಿಂದಿಳಿದವರು ನೀವಲ್ಲವೇ
ಬಳೆಗಾರ ಶೆಟ್ಟಿಯನು ಗದರಿಸಿಕೊಂಡವರು
ಬೆತ್ತವನು ತಂದವರು ನೀವಲ್ಲವೇ

ಹೊನ್ನು ಹೊಳೆ ನೀನೆಂದು, ಮುತ್ತು ಮಳೆ ನೀನೆಂದು
ಹಾಡಿ ಕುಣಿದವರು ನೀವಲ್ಲವೇ
ಮಲೆನಾಡ ಹೆಣ್ಣೆಂದು, ಒಲವಿತ್ತ ಹೆಣ್ಣೆಂದು
ಏನೇನೋ ಬರೆದವರು ನೀವಲ್ಲವೇ

ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟವರು ನೀವಲ್ಲವೇ
ಮಲ್ಲಿಗೆಯ ದಂಡೆಯನು ತುರುಬಿಗೆ ಹಿಡಿದವರು
ತುಟಿಗೆ ತುಟಿ ತಂದವರು ನೀವಲ್ಲವೇ

ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ದೊರೆಯಾಗಿ ಮೆರೆವವರು ನೀವಲ್ಲವೇ
ಗಂಡನಿಗೆ ಒಪ್ಪಾಗಿ, ಕಂದನಿಗೆ ದಿಕ್ಕಾಗಿ
ಪಯಣದಲಿ ಜೊತೆಯಾಗಿ ನಾನಿಲ್ಲವೇ

                                                             - ಕೆ. ಎಸ್. ನರಸಿಂಹ ಸ್ವಾಮಿ