ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday, 24 September 2012

ಹೇಳ್ಕೊಳ್ಳಕ್ ಒಂದ್ ಊರು / Helkollak ondooru

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನನ್ ಪರ್ಪಂಚ

ಏನೋ ಖುಸಿಯಾದಾಗ
ಮತ್ ಹೆಚ್ಚಿ ಹೋದಾಗ
ಹಂಗೇನೆ ಪ್ರಪಂಚದಂಚ
ದಾಟ್ಕಂಡಿ ಹಾರಾಡ್ತಾ
ಕನ್ನಡದಲ್ ಪದವಾಡ್ತಾ
ಹಿಗ್ಗೋದು ರತ್ನನ್ ಪರ್ಪಂಚ

ಹಗಲೆಲ್ಲ ಬೆವರ್ ಹರಿಸಿ
ತಂದಿದ್ದ್ರಲ್ಲಿ ಒಸಿ ಮುರಿಸಿ
ಸಂಜೆಲಿ ಹುಳಿ ಹೆಂಡ ಕೊಂಚ
ಹೀರ್ತ ಮೈ ಝುಂ ಅಂದ್ರೆ
ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನನ್ ಪರ್ಪಂಚ

ದುಕ್ ಇಲ್ಲ ದಾಲ್ ಇಲ್ಲ
ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ

ಬಡತನ ಗಿಡತನ ಏನಿದ್ರೇನು
ನಡತೇನ ಚೆನ್ನಾಗಿಟ್ಕೋಳೋದೆ ಅಚ್ಛಾ
ಅಂದ್ಕೊಂಡಿ ಸುಖವಾಗಿ
ಕಷ್ಟಕ್ಕೆ ನಗುಮುಖವಾಗಿ
ನಡೆಯೋದೇ ರತ್ನನ್ ಪರ್ಪಂಚ

ದೇವ್ರೇನ್ರ  ಕೊಡಲಣ್ಣ, ಕೊಡ್ದಿದ್ದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನನ್ ಪರ್ಪಂಚ

                                                                            - ಜಿ. ಪಿ. ರಾಜರತ್ನಂ 

Sunday, 23 September 2012

ಹಾಡು ಹಳೆಯದಾದರೇನು / Haadu haleyadaadarenu

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ....

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ.....

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ......

                                                                                - ಜಿ.ಎಸ್.ಶಿವರುದ್ರಪ್ಪ

ಕುರುಬರೋ ನಾವು ಕುರುಬರು / Kurubaro naavu kurubaru

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು

ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು
ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು || ಕುರುಬರೋ ||

ಏಳುಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ
ಇಟ್ಟವ್ರೆ ಕುರಿಗಳ ಚೆನ್ನಾಗಿ ಬಚ್ಚಿ
ಹೊಟ್ಟೆ೦ಬ ಬಾಗಿಲ ಬಲವಾಗಿ ಮುಚ್ಚಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ || ಕುರುಬರೋ ||

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ಬಾಳು ಹಾಲಿನ ಗಡಗಿ
ನಮ್ಮ ಕೈಲೇ ಇದ್ಯೋ ಅರಿವಿನ ಬಡಗಿ || ಕುರುಬರೋ ||

ಮೇವು ಹುಲ್ಸಾದಂತ ಮಸಣಿದು ಖರೆಯೇ
ಕುರಿ ಇಲ್ಲಿ ಮೆಯ್ಸಾಕ ಬಂದದ್ದು ಸರಿಯೆ
ತೊಳ ಹಾರಿ ಕುರಿಗಳ ಗೋಣು ಮುರಿಯೆ
ನಾಗಲಿಂಗ ಅಜ್ಜ ಹೇಳಿದ ಪರಿಯೇ || ಕುರುಬರೋ ||

                                                                               - ಶಿಶುನಾಳ ಶರೀಫ

Saturday, 22 September 2012

ನಾ ಚಿಕ್ಕವನಾಗಿದ್ದಾಗ / Naa chikkavanaagiddaaga

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

                                                                                          - ಬಿ. ಆರ್. ಲಕ್ಷ್ಮಣರಾವ್

Download this song

ನಲವತ್ತೇಳರ ಸ್ವಾತಂತ್ರ್ಯ / Nalavattelara Svatantrya

ಯಾರಿಗೆ ಬಂತು? ಎಲ್ಲಿಗೆ ಬಂತು?
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು

ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ

ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?

                                           - ಸಿದ್ಧಲಿಂಗಯ್ಯ