ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday, 24 October 2011

ಮೂಡುತ ರವಿ ರಂಗು ತಂದೈತೆ / Mooduta ravi rangu tandaite

ಮೂಡುತ ರವಿ ರಂಗು ತಂದೈತೆ,
ಓಡುತ ನದಿ ಹಾಡು ನೀಡೈತೆ,
ಬೆಟ್ಟದ ಮ್ಯಾಗೆ, ಕಟ್ಟೆಯ ಮ್ಯಾಗೆ,
ಗಾಳಿ ತೀಡೈತೆ.

ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು ಕಂಪು ಇಂಪು
ಒಟ್ಟಿಗೆ ಕೂಡೈತೆ.

ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ ನೋಟದೂಟ
ಸಂತೋಷ ಸವಿದೈತೆ.

Thursday, 20 October 2011

ನಾಕು ತಂತಿ / Naaku Tanti

ಒಂದು

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS
ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾS
ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ
ಹತವೊ ಹಿತವೋ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ
ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ.

ಎರಡು*

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡುನಡುಗಿ;
ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;
ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ 
ಸೊಲ್ಲಿನಲಿ;
ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;
ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವುದೋ
ನಾ ತಿಳಿಯೆ.
ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

ಮೂರು

'ಚಿತ್ತೀಮಳಿ, ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿSಯೊ ಮಗನS
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ'
'ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.'

ನಾಕು

'ನಾನು' 'ನೀನು'
'ಆನು' 'ತಾನು'
ನಾಕೆ ನಾಕು ತಂತಿ,
ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

                                 - ಅಂಬಿಕಾತನಯದತ್ತ 
                                    (ದ.ರಾ.ಬೇಂದ್ರೆ)

(* ಮೈಸೂರು ಅನಂತಸ್ವಾಮಿ ಅವರ ರಾಗಸಂಯೋಜನೆಯಲ್ಲಿ ಮೂಡಿರುವ ಗೀತೆಯಲ್ಲಿ ಈ ಎರಡನೇ ತಂತಿ ಗಣಿಸಲ್ಪಟ್ಟಿಲ್ಲ. ಭಾವಗೀತೆಯು ಕೇವಲ ಒಂದು, ಮೂರು ಮತ್ತು ನಾಲ್ಕನೇ ತಂತಿಗಳಿ೦ದೊಡಗೂಡಿದೆ).

Monday, 17 October 2011

ಎಲ್ಲಿ ಜಾರಿತೋ ಮನವು... / Elli jaarito manavu

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.

ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ 
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...

                                               - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ 

Friday, 14 October 2011

ಅಮೃತವಾಹಿನಿ / Amrutavahini

ಅಮೃತವಾಹಿನಿಯೊಂದು ಹರಿಯುತಿದೆ
        ಮಾನವನ ಎದೆಯಿಂದಲೆದೆಗೆ ಸತತ.

ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
        ಸುತ್ತಮುತ್ತಲು ಮರಳು ಮೇಲೆ ಪಾಚಿ.
ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
        ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
        ಏನನೋ ಕಾಯುತಿದೆ ಗುಪ್ತವಾಗಿ.

ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
        ಕರಗೀತು ಮುಗಿಲ ಬಳಗ
ಬಂದೀತು ಸೊದೆಯ ಮಳೆ,  ತುಂಬೀತು ಎದೆಯ ಹೊಳೆ
        ತೊಳೆದೀತು ಒಳಗು ಹೊರಗ

ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
        ಸೇರದಿರೆ ಇಲ್ಲ ನಿಸ್ತಾರ
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
        ಈ ಬಾಳಿಗಾ ಮಹಾಪೂರ!!!   
                                                         - ಗೋಪಾಲಕೃಷ್ಣ ಅಡಿಗ

ನನ್ನ ಇನಿಯನ ನೆಲೆಯ ಬಲ್ಲೆಯೇನೆ? / Nanna iniyana neleya balleyene

ನನ್ನ ಇನಿಯನ ನೆಲೆಯ ಬಲ್ಲೆಯೇನೆ?
ಹೇಗೆ ತಿಳಿಯಲಿ ಅದನು ಹೇಳೆ ನೀನೆ.

ಇರುವೆ ಸರಿಯುವ ಸದ್ದು,
ಮೊಗ್ಗು ಬಿರಿಯುವ ಸದ್ದು,
ಮಂಜು ಇಳಿಯುವ ಸದ್ದು ಕೇಳಬಲ್ಲ.
ನನ್ನ ಮೊರೆಯನು ಏಕೆ ಕೇಳಲೊಲ್ಲ.

ಗಿರಿಯ ಎತ್ತಲು ಬಲ್ಲ,
ಶರಧಿ ಬತ್ತಿಸಬಲ್ಲ,
ಗಾಳಿಗುಸಿರನೇ ಕಟ್ಟಿ ನಿಲಿಸಬಲ್ಲ.
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ.

ನೀರು ಮುಗಿಲಾದವನು,
ಮುಗಿಲು ಮಳೆಯಾದವನು,
ಮಳೆ ಬಿತ್ತು ತೆನೆ ಎತ್ತು ತೂಗುವವನು.
ನಲ್ಲೆ ಅಳಲನು ಏಕೆ ತಿಳಿಯನವನು.
   
                                                      - ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ

Friday, 7 October 2011

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ / Baa chakori chandra manchake

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ

ಚಂದ್ರಿಕಾಮಧುಪಾನಮತ್ತ
ಪೀನಕುಂಭಪಯೋಧವಿತ್ತ  
ವಕ್ಷಪರಿಲಂಭನ ನಿಮಿತ್ತ ನಿರಾವಲಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ಚರಣನೂಪುರಕಿಂಕಿಣಿಕೊಳ  
ಮದನಸಿಂಜಿನಿ ಜನಿತ ನಿಹ್ವಳ
ಚಿತ್ತ ರಂಜನಿ ತಳುವದೀಕ್ಷಣ 
ಚಂದ್ರ ಮಂಚಕೆ ಬಾ ಚಕೋರಿ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ ಚಕೋರಿ ಬಾ ಚಕೋರಿ ಎದೆ ಹಾರಿದೆ
ಬಾಯಾರಿದೆ ಚಕೋರ ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ನಿಕುಂಜ ರತಿವನ ಮದನ ಯಾಗಕೆ
ಅನಂಗರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚದ ಸಾಗ್ನಿ ಪಕ್ಷಿಯ ಅಚಂಚು ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ 

                                                            - ಕುವೆಂಪು

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ / Elenna manadanne

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ
      ಏಳು ಮಂಗಳದಾಯಿ ಉಷೆಯ ಗೆಳತಿ
ಏಳು ಮುತ್ತಿನ ಚೆಂಡೆ ಏಳು ಮಲ್ಲಿಗೆ ದಂಡೆ
      ಏಳು ಬಣ್ಣದ ಬಿಲ್ಲೆ ಮಾಟಗಾತಿ.

ಏಳೆನ್ನ ಕಲ್ಯಾಣಿ ಏಳು ಭಾವದರಾಣಿ
      ನೋಡು ಮೂಡಲದಲ್ಲಿ ರಾಗಮಿಲನ
ಮರದುದೆಯ ತೋರಣದಿ ಹೊಂಬಿಸಿಲ ಬಾವುಟವು
      ಗಾಳಿ ಬಟ್ಟೆಯಲದರ ಚಲನ ವಲನ

ಮಂಜಿನರಳೆಯ ಹಿಂಜಿ ತೂರುತಿಹ ನೇಸರನು
      ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೊಗರೇರಿಹನು ಏಳೆನ್ನ ಹೊಂಗೆಳತಿ
      ಮೊಗದ ಜವನಿಕೆ ತೆರೆದು ನಗೆಯ ನೀಡು

ಲಲಿತಶೃಂಗಾರ ರಸಪೂರ್ಣೆ ಚಂದಿರವರ್ಣೆ
      ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
      ಒಂದು ಚಣ ಜಗವನ್ನೇ ಮರೆತುಬಿಡುವೆ

                                                    - ಚನ್ನವೀರ ಕಣವಿ

Tuesday, 4 October 2011

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು / Ello hutti ello beledu

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..

ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು, ಸದಾ....
ತಪ್ತಕಾಮಿನಿ ನನ್ನ ಶಾಲ್ಮಲಾ..

ಭೂಗರ್ಭದ ಮೌನದಲ್ಲಿ ಧುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು, ಸದಾ....
ಸುಪ್ತಮೋಹಿನಿ ನನ್ನ ಶಾಲ್ಮಲಾ..

ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ,
ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..


                                                            - ಚಂದ್ರಶೇಖರ ಪಾಟಿಲ

ಈ ದಿನಾಂತ ಸಮಯದಲಿ / Ee dinaanta samayadali

ಈ ದಿನಾಂತ ಸಮಯದಲಿ
ಉಪವನ ಏಕಾಂತದಲಿ
ಗೋಧೂಳಿ ಹೊನ್ನಿನಲಿ
ಬರದೆ ಹೋದೆ ನೀನು, ಮರೆತು ಹೋದೆ ನೀನು.

ನಾ ಬಿಸುಸುಯ್ಯುವ ಹಂಬಲವೋ
ಶುಭ ಸಮ್ಮಿಲನದ ಕಾತರವೋ
ಬಾ ಇನಿಯ ಕರೆವೆ ನೊಂದು
ಬರದೆ ಹೋದೆ ನೀನು, ಮರೆತು ಹೋದೆ ನೀನು.

ತನುಮನದಲಿ ನೀನೆ ನೆಲಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು
ಶಶಿ ಮೆರೆಸಿದೆ ತೋರುಬೆರಳು
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ ಕಳೆಯೆ ಶಿಕ್ಷೆ
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ / Yariguntu Yarigilla Balella bevu bella

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ಈಸ ಬೇಕಯ್ಯ ಗೆಣೆಯ,
ಕಾಣದ್ದಕ್ಕೆ ಚಿಂತೆ ಯಾಕಯ್ಯ,
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.

ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ 
ಕಷ್ಟ ಮೆಟ್ಟಿ ಸಾಗ ಬೇಕಯ್ಯ ಓ ಗೆಣೆಯ 
ಕೈಯ ಚೆಲ್ಲಿ ಕೊರಗ ಬೇಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.

ಪ್ರೀತಿಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ ಓ ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.


                                                                - ಪ್ರೊ. ದೊಡ್ಡರಂಗೇ ಗೌಡ 

ಸಿರಿಗೆರೆಯ ನೀರಿನಲಿ / Sirigereya neerinali

ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು.
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು. 

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು.
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚಿಮ್ಮಿಸಿದ
ಹಾಲಲ್ಲಿ ನಿನ್ನ ಹೆಸರು.

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು.
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು.

ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ
ಬೆಳ್ದಿಂಗಳೋ ನಿನ್ನ ಹೆಸರು.
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು. 

                                                     - ಕೆ.ಎಸ್. ನರಸಿಂಹ ಸ್ವಾಮಿ.

Monday, 3 October 2011

ಜೋಗದ ಝೊಕ್ ( ಮಾನವನಾಗಿ ಹುಟ್ಟಿದ ಮೇಲೆ) / Manavanaagi huttida mele

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ |
ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ |
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ|
ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ   || ೧ ||

ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ |
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮಠ |
ದಾರಿ ಕಡಿದು ಮಾಡಿದರೆ ಗುಡ್ಡ ಬೆಟ್ಟ |
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ   || ೨ ||

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು |
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು |
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು |
ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು   || ೩ ||

ಅಂಕು ಡೊಂಕು ವಂಕಿ ಮುರಿ ರಸ್ತೆದಾರಿ |
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ |
ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ |
ನಡೆಯುತದೆ ಮೈಸೂರೊಳಗೆ ದರಂದುರಿ   || ೪ ||

ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ |
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ |
ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ |
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ   || ೫ ||

ಬುತ್ತಿ ಉಣುತಿದ್ರುಣ್ಣು ಇಲ್ಲಿ ಸೊಂಪಾಗಿದೆ |
ಸೊಂಪು ಇದಪು ಸೇರಿ ಮನಸು ಕಂಪಾಗ್ತದೆ |
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ |
ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ    || ೬ ||

ಅಡ್ಡ ಬದಿ ಒಡ್ಡು ನಲಿಸಿ ನೀರಿನ ಮಿತಿ |
ಇದರ ಒಳಗೆ ಇನ್ನು ಒಂದು ಹುನ್ನಾರೈತಿ |
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ |
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ    || ೭ ||

ಊಟ ಮುಗಿದಿದ್ರೇಳು ಮುಂದೆ ನೋಡೋದದೆ |
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ |
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ |
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ  || ೮ ||

ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ |
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ |
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ |
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ  || ೯ ||

ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ |
ಚಿಕ್ಕದೇವ ದೊಡ್ಡದೇವ ಮೈಸೂರಿನವರ |
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ |
ಎಲ್ಲ ಕಥೆ ಹೇಳುತದೆ ಕಲ್ಪಾಂತರ   || ೧೦ ||

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ |
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ |
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ |
ಮುಂದಿನವರು ಕಂಡರೆ ಸಾಕು ಸ್ವಂತ ಸುಖ   || ೧೧ ||

ಒಂದು ಎರಡು ಮೂರು ನಾಲ್ಕು ಆದಾವ್ ಮತ |
ಹಿಂದಿನಿಂದ ಹರಿದು ಬಂದದ್ದೊಂದೇ ಮತ |
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ |
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ    || ೧೨ ||

ಷಹಜಹಾನ ತಾಜಮಹಲು ಕೊಹಿನೂರ್ ಮಣಿ |
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ |
ಜೀವವಂತ ಶರಾವತಿಗಿನ್ನಾವ್ದೆಣಿ |
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ   || ೧೩ ||

ಶರಾವತೀ ಕನ್ನಡ ನಾಡ ಭಾಗೀರಥಿ |
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ |
ಸಾವು ನೋವು ಸುಳಿಯದಿಲ್ಲಿಯ ಕರಾಮತಿ |
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ   || ೧೪ ||

                                                  - ಮೂಗೂರು ಮಲ್ಲಪ್ಪ 

ಎದೆತುಂಬಿ ಹಾಡಿದೆನು / Ede Tumbi Haadidenu

ಎದೆತುಂಬಿ ಹಾಡಿದೆನು ಅಂದು ನಾನು,
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು 
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.  

                                             - ಡಾ. ಜಿ.ಎಸ್. ಶಿವರುದ್ರಪ್ಪ