ಅಮೃತವಾಹಿನಿಯೊಂದು ಹರಿಯುತಿದೆ
        ಮಾನವನ ಎದೆಯಿಂದಲೆದೆಗೆ ಸತತ.
ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
        ಸುತ್ತಮುತ್ತಲು ಮರಳು ಮೇಲೆ ಪಾಚಿ.
ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
        ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
        ಏನನೋ ಕಾಯುತಿದೆ ಗುಪ್ತವಾಗಿ.
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
        ಕರಗೀತು ಮುಗಿಲ ಬಳಗ
ಬಂದೀತು ಸೊದೆಯ ಮಳೆ,  ತುಂಬೀತು ಎದೆಯ ಹೊಳೆ
        ತೊಳೆದೀತು ಒಳಗು ಹೊರಗ
ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
        ಸೇರದಿರೆ ಇಲ್ಲ ನಿಸ್ತಾರ
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
        ಈ ಬಾಳಿಗಾ ಮಹಾಪೂರ!!!    
                                                         - ಗೋಪಾಲಕೃಷ್ಣ ಅಡಿಗ
 
No comments:
Post a Comment