ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 31 December 2011

ಮಾವನ ಮನೆಯಲ್ಲಿ (ರಾಯರು ಬಂದರು ಮಾವನ ಮನೆಗೆ) / Raayaru bandaru maavana manege

ರಾಯರು ಬಂದರು ಮಾವನ ಮನೆಗೆ
     ರಾತ್ರಿಯಾಗಿತ್ತು;
ಹುಣ್ಣಿಮೆ ಹರಸಿದ ಬಾನಿನ ನಡುವೆ
     ಚಂದಿರ ಬಂದಿತ್ತು. - ತುಂಬಿದ
     ಚಂದಿರ ಬಂದಿತ್ತು.

ಮಾವನ ಮನೆಯಲಿ ಮಲ್ಲಿಗೆ ಹೂಗಳ
     ಪರಿಮಳ ತುಂಬಿತ್ತು.
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
     ತಂಬಿಗೆ ಬಂದಿತ್ತು - ಒಳಗಡೆ
     ದೀಪದ ಬೆಳಕಿತ್ತು.

ಘಮಘಮಿಸುವ ಮೃಷ್ಟಾನ್ನದ ಭೋಜನ
     ರಾಯರ ಕಾದಿತ್ತು.
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ
     ರಾಯರ ಕರೆದಿತ್ತು - ಭೂಮಿಗೆ
     ಸ್ವರ್ಗವೆ ಇಳಿದಿತ್ತು.

ಚಪ್ಪರಗಾಲಿನ ಮಂಚದ ಮೇಗಡೆ
     ಮೆತ್ತನೆ ಹಾಸಿತ್ತು.
ಅಪ್ಪಟ ರೆಸಿಮೆ ದಿಂಬಿನ ಅಂಚಿಗೆ
     ಚಿತ್ರದ ಹೂವಿತ್ತು. - ಪದುಮಳು
     ಹಾಕಿದ ಹೂವಿತ್ತು.

ಚಿಗುರೆಲೆ ಬಣ್ಣದ ಅಡಕೆಯ ತಂದಳು
    ನಾದಿನಿ ನಗುನಗುತ;
ಬಿಸಿಬಿಸಿ ಹಾಲಿನ ಬಟ್ಟಲ ತಂದರು
    ಅಕ್ಕರೆಯಲಿ ಮಾವ - ಮಡದಿಯ
    ಸದ್ದೇ ಇರಲಿಲ್ಲ.

ಮಡದಿಯ ತಂಗಿಯ ಕರೆದಿಂತೆಂದರು;
    "ಅಕ್ಕನ ಕರೆಯಮ್ಮ"
ಮೆಲುದನಿಯಲಿ ನಾದಿನಿ ಇಂತೆಂದಳು;
    "ಪದುಮಳು ಒಳಗಿಲ್ಲ" - ನಕ್ಕಳು.
    ರಾಯರು ನಗಲಿಲ್ಲ.

ಏರುತ ಇಳಿಯುತ ಬಂದರು ರಾಯರು
    ದೂರದ ಊರಿಂದ.
ಕಣ್ಣನು ಕಡಿದರು ನಿದ್ದೆಯು ಬಾರದು
    ಪದುಮಳು ಒಳಗಿಲ್ಲ - ಪದುಮಳ
    ಬಳೆಗಳ ದನಿಯಿಲ್ಲ.

ಬೆಳಗಾಯಿತು; "ಸರಿ, ಹೊರಡುವೆ"ನೆಂದರು
    ರಾಯರು ಮುನಿಸಿನಲಿ.
ಒಳಮನೆಯಲಿ "ನೀರಾಯಿತು!" ಎಂದಳು
    ನಾದಿನಿ ರಾಗದಲಿ. "ಯಾರಿಗೆ?"
    ಎನ್ನಲು ಹರುಷದಲಿ.
ಪದುಮಳು ಬಂದಳು ಹೂವನು ಮುಡಿಯುತ
    ರಾಯರ ಕೋಣೆಯಲಿ.

                                                        - ಕೆ. ಎಸ್. ನರಸಿಂಹ ಸ್ವಾಮಿ

ತಿಂಗಳಾಯಿತೆ? / tingalayite?

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು.

ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ
ವೇಣಿಯಿರಲು ವಸಂತ ಪುಷ್ಪವನದಂತೆ
ಮನಸು ಬಾರದು ನನಗೆ ಅಡಿಯನಿಡೆ ಮುಂದೆ.

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ -
ದಾರಿಯಲೆ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋದುದು ಬಂಡಿ ಎಂದು ಹೇಳಿದನು.

ಹಿಂದಿರುಗಿ ಬಂದೆನ್ನ ಒಂದೇ ಮಾತಿನಲಿ
"ತಿಂಗಳಾಯಿತೆ?" ಎಂದಳೆನ್ನ ಹೊಸ ಹುಡುಗಿ!

                                                          - ಕೆ. ಎಸ್. ನರಸಿಂಹ ಸ್ವಾಮಿ

ಅಂತರಂಗದ ಮೃದಂಗ.. / Antarangada Mrudanga

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ತಾನ, ತೊಂತನನ ತಾನ,
ತೊಂತನನ ತಾನ

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂದದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ||

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ||

ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ||

                                                        - ಅಂಬಿಕಾತನಯದತ್ತ 

ಸುಬ್ಬಾಭಟ್ಟರ ಮಗಳೇ.../ Subba bhattara magale

ಸುಬ್ಬಾಭಟ್ಟರ ಮಗಳೇ, ಇದೆಲ್ಲ ನಂದೇ ತಗೊಳ್ಳೇ.
ನೀಲಿ ನೈಲೆಕ್ಸಿನ ಮೆಘವಿನ್ಯಾಸದ ಆಕಾಶದ ಸೀರೆ,
ದಿಗಂತಗಳೇ ಮೇರೆ.
ಮುಂಜಾವಿನ ಬಂಗಾರದ ಬೆಟ್ಟ, ಬೆಳದಿಂಗಳ ಬೆಳ್ಳಿ.
ನಿನ್ನ ಭಾಗ್ಯಕೆ ಎಣೆಯೆಲ್ಲಿ ||

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿ ಜಿಗಿ ಒಡವೆ ದುಕಾನು,
ಆರಿಸಿಕೋ ಬೇಕೇನು.
ಚಿಕ್ಕೆ ಮೂಗುತಿ, ಚಂದ್ರ ಪದಕಕ್ಕೆ,
ನೀಹಾರಿಕೆ ಹಾರ, ನನ್ನ ಸಂಪತ್ತೆಷ್ಟು ಅಪಾರ ||

ನಸುಕಲಿ ಹಿತ್ತಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು,
ಎಂದೂ ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ,
ಸಪ್ತವರ್ಣದ ಕಮಾನು,
ನಿನಗೇ ಹೌದು!

ಪಾತರಗಿತ್ತಿಯ ಪಕ್ಕವನೇರಿ,
ಧೂಪದ ಕಾನಿಗೆ ಹಾರಿ,
ಪ್ರಾಯದ ಮಧು ಹೀರಿ,
ಜುಳು ಜುಳು ಹರಿಯುವ ಕಾಲದ ಹೊಳೆಯಲಿ,
ತೇಲುವ ಮುಳುಮುಳುಗಿ,
ನಿನ್ನ ಹೊಸತನದಲಿ ಬೆಳಗಿ ||

                                                           - ಬಿ. ಆರ್. ಲಕ್ಷ್ಮಣರಾವ್              

Thursday, 29 December 2011

ಗೋಪಿ ಮತ್ತು ಗಾಂಡಲೀನ / gopi mattu gandaleena

ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು,
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.

'ಗುಂಡು ಹಾಕೋ ಗೋಪಿ',
'ನಂಗ್ ಸಾಕಪ್ಪ ಕಾಪಿ',
'ಚಿಕ್ಕನ್ ಬಿರಿಯಾನಿ',
'ಏಕ್ ಲೋಟ ಥ೦ಡ ಪಾನಿ'.

ಜಾಸ್ ಗಾನದ ಹೊಳೆಗೆ ತೇಲಿ ಬಂದಳು ಕ್ಯಾಬರಿ
ಬಾಂಗೋತಾನದ ಅಲೆಗೆ ತೂಗಿ ಅರೆ ದಿಗಂಬರಿ
ಗಾಂಡಲೀನಲು,
ಮಧುಭಾಂಡದಂಥವಳು 
ಬಿಟ್ಟ ಕಣ್ಣು ಬಾಯಿ ಗೋಪಿ ಗುಮ್ಮಾದನು
ಅವಳು ಜಗಿಯುತಿದ್ದ ಚ್ಯೂಯಿಂಗ್ ಗಮ್ಮಾದನು.

ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತ
ತನ್ನ ಅಂಗೋಪಾಂಗಗಳ ತಾನೇ ನೇವರಿಸುತ್ತಾ
ನಿಧ-ನಿಧಾನವಾಗಿ,
ವಿಧ-ವಿಧಾನವಾಗಿ,
ಬತ್ತಲಾಗುತಿರಲು ಗೋಪಿ ಕಲ್ಲಾದನು.
ರಂಭೆಯನ್ನು ಕಂಡ ಋಷಿಯ ಸ್ಟಿಲ್ಲಾದನು.

ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ಚೊಂಬು ಕೆನ್ನೆ ಮೇಲೆ,
ತುಟಿ ಬಿಂಬಿಸಿದಳು ಬಾಲೆ
ಬುರ ಬುರ ಬುರ ಊದಿ ಗೋಪಿ ಬೋಂಡವಾದನು.
ಮಾದ್ರಿಯಪ್ಪಿದಾಗಿನಂಥ ಪಾಂಡುವಾದನು.

ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಹಾ, ವೆಂಕಟಸುಬ್ಬಿ!
ಹೆಂಡತಿ ನೆನಪು ದಬ್ಬಿ,
ಗಾಂಡಲೀನಳ ಪಾದಪದ್ಮಕಡ್ಡ ಬಿದ್ದನೋ.
ಪರನಾರಿ ಸಹೋದರನು ಕಾಮ ಗೆದ್ದನೋ.

                                                       - ಬಿ. ಆರ್. ಲಕ್ಷ್ಮಣ ರಾವ್

Wednesday, 28 December 2011

ಆನಂದಮಯ ಈ ಜಗ ಹೃದಯ... / anandamaya ee jaga hrudaya

ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...

ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...

ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...

ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...

                                                                                - ಕುವೆಂಪು 

ಅವನ್ನೋಡ .... / avannoda

ಅವನ್ನೋಡ ಕೊಳಲೂದಿ ಕುಣಿಯುವ ಹುಡುಗ
ಹುಚ್ಚು ಕೆರಳಿಸುತಾನೋ ಅಂಗಾಂಗದೊಳಗ
ಹೆಗಲಿನ ಗುಂಗಡಿ, ನೆತ್ತಿ ತುರಾಯಿ,
ಗರಿ ಬಿಚ್ಚಿ ಕುಣಿದ್ಹಾಂಗ ಶ್ರಾವಣದ ಸೋಗಿ.
                                              ಅವನ್ನೋಡ....

ಕಲ್ಲೆಂದು ಮೆಲ್ಲಗೆ ಸೋಲ್ಲಿಲ್ಲದೆ ಬಂದ,
ಎಡದ ಕೈಯಲಿ ಎನ್ನ ಸೂರ್ಮುಡಿಯ ಹಿಡಿದ,
ಬಲಗೈಲಿ ಮುಡಿಗೆ ಮಲ್ಲಿಗೆ ಸುತ್ತಿ ನಲಿದ,
ಮುಂಗುರುಳು ನ್ಯಾವರಿಸಿ ಕಣ್ಣು ಹಪ್ಪಾದ.
                                              ಅವನ್ನೋಡ....

ತಡೆಯಲಾಗಲೇ ಇಲ್ಲ ನಮ್ಮ ಮೈ ನವಿರ,
ಮೈತುಂಬ ಸಡ ಸಡ ತುಳುಕ್ಯಾವ ಬೆವರ,
ಹಟ್ಟಿ ಸ್ವಾಮಿಯೇ ನಿನ್ನ ಕಟ್ಟಳೆಯ ಹುರಿತ,
ಅಡಿಗಡಿಗೆ ಇರಲಾರೆ ನಾ ನಿನ್ನ ಮರೆತ.
                                              ಅವನ್ನೋಡ....

ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡ,
ನಮ್ಮ ರಾಗದ ಹುಚ್ಚ ಕೆರಳಿಸಬ್ಯಾಡ,
ಮಂದಿ ಏನಂದಾರೋ ನಾ ಹಿಂದೆ ಬರಲು,
ವಾರಿಗೀ ದೇವರು ಕೊಪಗೊಂಡಾರೋ.
                                              ಅವನ್ನೋಡ....

ತಿಳಿಯಬಲ್ಲವರೆಲ್ಲ ತಿಳಿ ಹೇಳಿರಮ್ಮ,
ಸುರರ ಜಾತಿಗೆ ನಾನು ಹೊರೆತಾದೇನಮ್ಮ ,
ನಾವು ಹೊನ್ನಿಗರವ್ವ ಚೆಲುವನ ಕಲೆಗೆ.
ಕಲೆಯೊಂದಿಗೆ ಇವನ ಒಕ್ಕ ಒಲುಮೆಗೆ.
                                              ಅವನ್ನೋಡ....

                                                                   - ಚಂದ್ರಶೇಖರ ಕಂಬಾರ


For MP3 refer - http://abhijnaa.wordpress.com/2012/04/21/%E0%B2%85%E0%B2%B5%E0%B2%A8%E0%B3%8D%E0%B2%A8%E0%B3%8B%E0%B2%A1-%E0%B2%95%E0%B3%8A%E0%B2%B3%E0%B2%B2%E0%B3%82%E0%B2%A6%E0%B2%BF-avn-noda-kolaroori/

Tuesday, 27 December 2011

ನನ್ನ ನಲವಿನ ಬಳ್ಳಿ..... / Nanna nalavina balli

ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರೆಸದಿರು ನೋವ.

                                          ನನ್ನ ನಲವಿನ ಬಳ್ಳಿ.....

ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ.

                                          ನನ್ನ ನಲವಿನ ಬಳ್ಳಿ.....

ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು - ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ -
ಬಿಟ್ಟುಬಿಡು ಈಗೆನ್ನ ಮುಕ್ತನಂತೆ.

                                          ನನ್ನ ನಲವಿನ ಬಳ್ಳಿ.....

                                                                                 - ಕೆ. ಎಸ್. ನಿಸಾರ್ ಅಹಮದ್ 

Thursday, 22 December 2011

ಯಾವ ಹಾಡು ಹಾಡಲಿ / Yaava haadu haadali

ಯಾವ ಹಾಡು ಹಾಡಲಿ ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ?

ಸುತ್ತ ಮುತ್ತ ಮನೆ ಮಠಗಳು | ಹೊತ್ತಿಕೊಂಡು ಉರಿಯುವಲ್ಲಿ
ಸೋತು ಮೂಕವಾದ ಬದುಕು | ನಿಟ್ಟುಸಿರೊಳು ತೇಲುವಲ್ಲಿ
ಯಾವ ಹಾಡು ಹಾಡಲಿ || ೧ ||

ಬರಿ ಮಾತಿನ ಜಾಲದಲ್ಲಿ | ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ | ಹಸಿದ ಹೊಟ್ಟೆ ನೆರಳುವಲ್ಲಿ |
ಯಾವ ಹಾಡು ಹಾಡಲಿ || ೨ ||

ಉರಿವ ಕಣ್ಣ ಚಿತೆಗಳಲ್ಲಿ | ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ | ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡು ಹಾಡಲಿ || ೩ ||

ಬೆಳಕಿಲ್ಲದ ದಾರಿಯಲ್ಲಿ | ಪಾಳುಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ | ಕುರುಡ ಪಯಣ ಸಾಗುವಲ್ಲಿ
ಯಾವ ಹಾಡು ಹಾಡಲಿ || ೪ ||

                                                                           - ಜಿ. ಎಸ್. ಶಿವರುದ್ರಪ್ಪ    

Monday, 19 December 2011

ಬಾರೋ ವಸಂತ ಬಾರೋ ಬಾ... ಬಾರೋ / Baro Vasanta Baro

ಬಾರೋ ವಸಂತ ಬಾರೋ ಬಾ... ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ ||

ಬಾರೋ ಸಂತನೆಗಳ ಕಳಚಿ
ಹೆಜ್ಜೆಗಳಿಗೆ  ತಾಳವನುಣಿಸಿ
ದಣಿದ ಮೈಗೆ ತಂಗಾಳಿಯ
ಮನಸಿಗೆ ನಾಳೆಯ ಸುಖ ದೃಶ್ಯವ ಸಲಿಸಿ ||

ಮೊಗಚುತ ನೆನ್ನೆಯ ದುಃಖಗಳ
ತೆಗೆಯುತ ಹೊಸ ಅಧ್ಯಾಯಗಳ
ಅರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ ||

ಎಳೆ ಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿಶೀಲ ಹೊಸ ಹೆಜ್ಜೆಯಲಿ ||  

                                                 - ಎನ್. ಎಸ್. ಲಕ್ಷ್ಮಿನಾರಾಯಣ  ಭಟ್ಟ  

Friday, 16 December 2011

ಬೆಣ್ಣೆಗಳ್ಳ ಕೃಷ್ಣ / Benne kadda namma krishna

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ.

ಬೆಣ್ಣೆಯ ಕದ್ದು ಜಾರುತ ಬಿದ್ದು
ಮೊಳಕಾಲೂದಿಸಿಕೊಂಡ;
ಬಿಂದಿಗೆ ಬಿದ್ದು ಸಿಡಿಯಲು ಸದ್ದು
ಬೆಚ್ಚಿದ ರಾಧೆಯ ಗಂಡ.
                            ಬೆಣ್ಣೆ ಕದ್ದ ....

ತಾಯಿ ಬಂದಳೋಡಿ
ಕಳ್ಳನ ಕಣ್ಣಿನಲ್ಲಿ ಕೊಡಿ!
ಕಣ್ಣಲಿ ಆಕೆ ಸಿಟ್ಟನು ತಾಳಿ
ಸೊಂಟಕೆ ಕೈಯಿಟ್ಟು,
ಆದಳು ಅರೆ ಚಣ ಭೀಕರ ಕಾಳಿ
ದುರುದುರು ಕಣ್ ಬಿಟ್ಟು!
ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ
ಒರಟನ ನೋಟಕ್ಕೆ -
ಇಳಿಯಿತು ಕೋಪ ಅರಳಿತು ಕೆಂದುಟಿ
ತುಂಟನ ಆಟಕ್ಕೆ;
ತಪ್ಪಿದ ದಂಡಕೆ ನಿಟ್ಟುಸಿರೆಳೆದ
ಬೆಣ್ಣೆಗಳ್ಳ ನೀಲ.
ತಟ್ಟನೆ ಅಳುವುದ ನಿಲ್ಲಿಸಿ ನಕ್ಕ
ಬಾಯಗಲಿಸಿ ಬಾಲ -
ಹರಡಿದ ಬೆಳುದಿಂಗಳ ಜಾಲ.

ಅವನ ಅಕುಟಿಲ ಬೆಣ್ಣೆಯಂಥ ನಗು
ಕಾಯಲಿ ಜಗದವರ;
ಸಂತತ ನಗಿಸಲಿ ನಗದವರ.

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ. 
                                                     - ಕೆ. ಎಸ್. ನಿಸಾರ್ ಅಹಮದ್

Wednesday, 14 December 2011

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು / mucchumareyilladeye ninna mundellavanu

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ||

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ
ನರಕ ತಾನುಳಿಯುವುದೇ ನರಕವಾಗಿ ||

ಶಾಂತ ರೀತಿಯಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನೆಂದೆನ್ನ ರಕ್ಷಿಸೈ 
ನಿನ್ನ ನೀತಿಯ ಬೆಳಕಿನ ಆನಂದಕೈ ||

                                                        - ಕುವೆಂಪು
-------------------------------------------------------------------------------------------------------

mucchumareyilladeye ninna mundellavanu

mucchumareyilladeye ninna mundellavanu
bicchiduve o guruve antaraatma
paapavide punyavide narakavide naakavide
sveekarisu o guruve antaraatma ||

ravige kaantiyaneeva ninna kanneekshisalu
paapa taanuliyuvude paapavaagi
gange taanudbhavipa ninnadiya sonkige
naraka taanuliyuvude narakavaagi ||

shaanta reetiyalimmi kadadiruvudennaatma
naanta reetiyu adento o ananta
nanna neetiya kurudinindenna rakshisai
ninna neetiya belakina aanandakai ||

                                                         - KUVEMPU

Tuesday, 13 December 2011

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / Amma nanu devaraane benne kaddillamma

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಶಾಮನ
ಸೂರದಾಸ ಪ್ರಿಯಶಾಮನ ಶಾಮನ ಮುತ್ತಿಟ್ಟು ನಕ್ಕಳು ಗೋಪಿ ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------------------------------------------------------

Amma naanu devaraane benne kaddillamma

Amma naanu devaraane benne kaddillamma
ella seri nanna baayige benneya mettidaramma ||

neene nodu bennegadige soolina neluvalli
hege taane tegeyali amma nanna putta kaigalalli ||

shaama helida benne mettida tanna baayi oresuttaa
benne oresida kaiya benna hinde maresuttaa ||

Ettida kaiya kadagolannu moolelittu nakkalu gopi
sooradaasa priyashaamana shaamana
sooradaasa priya shaamana muttittu nakkalu gopi ||

ಓ ನನ್ನ ಚೇತನ / O nanna Chetana

ಓ ನನ್ನ ಚೇತನ
ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ ||

ನೂರುಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ ||

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು ||

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು ||

                                           - ಕುವೆಂಪು
--------------------------------------------------------------------------------------------------------

O nanna chetana 

O nanna chetana
aagu nee aniketana ||

rooparoopagalanu daati
naama kotigalanu meeti
edeya biriye bhaavadeeti ||

noorumatada hottatoori
ella tatvadelle meeri
nirdigantavaagi eri ||

elliyuu nilladiru
maneyanendu kattadiru
koneyanendu muttadiru ||

ananta taananantavaagi
aagutihane nitya yogi
ananta nee anantavaagu
aagu aagu aagu aagu ||

                                          - KUVEMPU     

Sunday, 11 December 2011

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು / Udayavagali namma cheluva kannada nadu

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು |

ರಾಜನ್ಯರಿಪು ಪರಶುರಾಮನಾಳಿದ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರ ವೃಂದದ ನಾಡು |

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು ||

ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರ ನಾರಾಯಣನ ಬೀಡು ||  

                                                          - ಹುಯಿಲುಗೋಳ ನಾರಾಯಣ ರಾವ್

Monday, 5 December 2011

ಎಲ್ಲಿರುವೆ ಕಾಣಿಸದೆ ಕರೆವ ಕೊಳಲೇ. / Elliruve kanisade kareva kolale

ಎಲ್ಲಿರುವೆ ಕಾಣಿಸದೆ ಕರೆವ ಕೊಳಲೇ.
ಎಲ್ಲಿರುವೆ ಹೇಳು ನೀ ನಿಜದೆ ನೆರಳೇ.

ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ.
ನಿಂತ ಎದೆ ಬನದಲ್ಲಿ ಚಿಂತೆ ಬರೆಯಲು ಯಾರ
ಎಸೆದ ಕೋಗಿಲೆಯ ದನಿ ಹರಡಿದಂತೆ.

ನಿನಗೆಂದೇ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ.
ಓಡಿ ಬಂದೆನು ಇದೋ ಪರಿವೆ ಇರದೆ
ಓಡಿ ಬರುವಂತೆ ನದಿ ಕಡಲ ಕರೆಗೆ.

                                                    - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

-------------------------------------------------------------------------------------------------------

Elliruve kaanisade kareva kolale

Elliruve kaanisade kareva kolale
Elliruve helu nee nijade nerale.

Manju neyuva sanjeganasinante
Sanje bisilina maleya manasinante
Ninta ede banadalli chinte bareyalu yara
Eseda kogileya dani haradidante.

Ninagende nela baanu koogi karede
Hola kaanu banavella tirugi navede
Odibandenu ido parive irade
Odi baruvante nadi kadala karege.     

ಮಡಕೇರೀಲಿ ಮಂಜು! / madikeri mel manju

ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಕೇರೀಲಿ ಮಂಜು!


ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಾಲ್ದು ಮಂಜು!
ತಾಯಿ ಮೊಗೀನ್ ಎತ್ಕೊಂಡ೦ಗೆ
ಒಂದಕ್ಕೊಂದು ಅತ್ಕೊ೦ಡ೦ಗೆ
ಮಡಕೇರೀನ ಎದೆಗೊತ್ಕೊಂಡಿ
ಜೂಗೀಡ್ಸ್ತಿತ್ತು ಮಂಜು!

ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಕೇರೀ ಮೇಲ್ ಮಂಜು!
ಮಂಜಿನ್ ಮಸಕಿನ್ ಕಾವಲ್ನಲ್ಲಿ
ಒಣಗಿದ ಉದ್ದಾನೆ ಉಲ್ನಲ್ಲಿ
ಒಳಗೆ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು!
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಟದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!

ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವವ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರೇ ಬರಲಿ
ಬಿಸಿಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ದು
ಮಡಕೇರೀಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ - ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋ೦ತಿತ್ತು
ಮಡಕೇರೀಗೆ ಮಂಜು!

                                                     - ಜಿ. ಪಿ. ರಾಜರತ್ನಂ  

Saturday, 3 December 2011

ತೊರೆದು ಹೋಗದಿರೋ ಜೋಗಿ.... / Toredu hogadiro jogi

ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.

ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.

ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.

ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.

                                                      - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
--------------------------------------------------------------------------------------------------------

Toredu hogadiro jogi.

toredu hogadiro jogi.
adigeragida ee deenala maretu,
saaguve eke viraagi.

prema homada parimala pathadali
salisu deekshe enage.
ninna virahadali uridu hogalu
siddhaliruva nanage.

hooduve gandhada chiteya
naduve niluve naane.
uri sokisu prabhuve,
chitege preetiyinda neene.

uridu ulivenu boodiyali
lepisiko ada maige.
meeraprabhu giridharane, jyotiyu
jyotiya serali heege.

ಸಂಜೆಯ ರಾಗಕೆ ಬಾನು ಕೆಂಪೇರಿದೆ / sanjeya ragake banu kempagide

ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ,
ಈಗ ರಂಗೇರಿದೆ ||

ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ||

ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ ||

ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ ಲೋಕವು ತೆರೆದಿದೆ ||

--------------------------------------------------------------------------------------------------------

sanjeya raagake baanu kemperide

sanjeya raagake baanu kemperide
tingalu moodi belakina kodi chelladide
eega rangeride ||

maragida nelada mele neralanu haaside
hoogala dalagala naduve ninade beralide ||

gaaliya joteya gandhavu ninnannu savaride
olagu horagu vyaapisi yavvana keralide ||

koladali moodida bimbavu hoogala mareside
daladali entaha kanasina lokavu teredide ||