ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday, 31 December 2012

ದೇಹವನು ಹೀಗಳೆಯಬೇಡ / Dehavanu heegaleyabeda

ದೇಹವನು ಹೀಗಳೆಯಬೇಡ
ಗೆಳೆಯ... ದೇಹವನು ಹೀಗಳೆಯಬೇಡ
ನೀನಾಗಿ ಕಲ್ಪಿಸಿದ ಮಾಪಕಗಳಿಂದ...

ಮೂಳೆ ಮಾಂಸದ ತಡಿಕೆಯಿದು ಪಂಜರ
ಎಂದು ನೀನೆಂದರೂ ಇದು ಸುಂದರ
ಭವದೆಲ್ಲ ಅನುಭವ ಇದರ ಕೊಡುಗೆ
ಅನುಭಾವಕೂ ಇದೇ ಚಿಮ್ಮು ಹಲಗೆ

ನೀ ಪಠಿಸುವಾಗಲೂ ತಾರಕದ ಮಂತ್ರ
ತನ್ನ ಪಾಡಿಗೆ ತಾನು ದುಡಿವುದೀ ಯಂತ್ರ
ಇದಕಿತ್ತರೂ ನಿನ್ನ ನಾಮಧೇಯ
ನಿನಗಿಂತಲೂ ಪ್ರಕೃತಿಗೆ ಇದು ವಿಧೇಯ

ಈ ಏಣಿಯನ್ನೆ ಬಳಸಿ ನೀನೇರುವೆ
ಕಡೆಗಿದನೆ ತೊಡಕೆಂದು ನೀ ದೂರುವೆ
ದೇಹವನು ತೊರೆದು ನೀ ಪಾರಾದ ಬಳಿಕ
ಏನಿದ್ದರೇನು ಎಲ್ಲಿ ಸಂಪರ್ಕ..

* ರಚನೆ ಯಾರದೆಂದು ತಿಳಿದಿಲ್ಲ.

Download this song

ಬಾ ಬಾಳಿನ ಕತ್ತಲಲಿ / Baa balina kattalali

ಬಾ ಬಾಳಿನ ಕತ್ತಲಲಿ ದೀವಿಗೆಯನು ಬೆಳಗು
ಥಳಥಳಿಸಲಿ ಕಾಂತಿ ಎಲ್ಲ ಮನೆಯ ಒಳಗು ಹೊರಗು

ಸುತ್ತ ಕವಿದ ಅಜ್ಞಾನದ ಮೊತ್ತವನ್ನು ಮುತ್ತಲು
ಅರಿವ ಪ್ರಭೆಯ ಪಡೆಪತಾಕೆ ಶೌರ್ಯದಿಂದ ಎತ್ತಲು
ಆರದಂತೆ ಭಸ್ಮಗೊಳಿಪ ಉರಿಕಿಚ್ಚಿನ ಹುಚ್ಚು
ಜೀವನಗಳ ದೀಪ್ತಗೊಳಿಸುವಂಥ ಹಣತೆ ಹಚ್ಚು

ಮನುಜ ಮನುಜರೆದೆಗಳಲ್ಲಿ ಬೇರೂರಿದ ಭೀತಿಯ
ಹೊಡೆದಟ್ಟುತ ನೆಲೆಗಾಣಿಸು ನಿರುಪಮ ಪ್ರೀತಿಯ
ಬಿರಿದ ಬದುಕುಗಳನು ಬೆಳಕ ಬೆಸುಗೆಯಿಂದ ಬಂಧಿಸು
ಮುರಿದ ಮನಸುಗಳನು ಮರಳಿ ಒಂದಾಗಿಸಿ ಹೊಂದಿಸು

ಮೇಲು ಕೀಳು ಎಣಿಕೆಯಳಿದು ಸರಿಸಮಾನ ಭಾವನೆ
ಬಗೆದು ಜನತೆ ಹೋಲುತಿರಲಿ ಒಂದೇ ಬಳ್ಳಿ ಹೂವನೆ
ಪ್ರತಿದಿನವೂ ದೀಪಾವಳಿ ಒಸಗೆಯಾಗಿ ತೊಳಗಲಿ
ಬೆಳಕ ನಂಬಿ ಬೆಳಕು ತುಂಬಿ ಬೆಳಕಾಗಿಯೆ ಅರಳಲಿ

* ಗೀತ ಸಂಪದ ಸಂಕಲನದ ಗೀತೆ

 Download this song

Sunday, 23 December 2012

ಒಂದು ಮಣ್ಣಿನ ಜೀವ ಎಂದೂ / Ondu mannina jeevavendoo

ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲೇ ಉಳಿಯದು
ಸಣ್ಣ ಸಸಿಯೇ ಬೆಳೆದು ದೇವಿಗೆ ಪಾರಿಜಾತವ ಸುರಿವುದು.
                                                                      ಒಂದು ಮಣ್ಣಿನ ಜೀವ ಎಂದೂ...

ನೀರು ತುಂಬಿದ ಮಣ್ಣ ಪಾತಿಯೆ ಕಂದನಿಗೆ ಕದಲಾರತಿ.
ನೂರು ಕುಡಿಗಳ ದೀಪವೃಕ್ಷವೇ ಅಮ್ಮನೆತ್ತುವ ಆರತಿ.
ಹಕ್ಕಿಪಕ್ಕಿಯ ಬಣ್ಣದಕ್ಷತೆ ಅರಕೆ ಬಾಗಿದ ಮುಡಿಯಲಿ
ಹಸಿರಿನೆಲೆಗಳ ಉಸಿರಿನಾಶೀರ್ವಚನ ಅರಗಿಣಿ ನುಡಿಯಲಿ
                                                                      ಒಂದು ಮಣ್ಣಿನ ಜೀವ ಎಂದೂ...

ಯಾವುದೋ ಸೋಬಾನೆ ಬಾನೆ ತುಂಬಿ ತುಳುಕಿದ ಝೇಂಕೃತಿ
ತುಟಿಯ ಬಟ್ಟಲು ಸುರಿವ ಅಮೃತಕೆ ಎಲ್ಲಿ ಇದೆಯೋ ಇತಿಮಿತಿ
ಅಂದು ಒಂದೇ ಬಿಂದು ಇಂದೋ ಎಂದೂ ಬತ್ತದ ನಿಚ್ಚರಿ
ಮಣ್ಣ ಮಕ್ಕಳ ಕಣ್ಣನೊರೆಸುವ ಹಸಿರ ಸೆರಗೊ ಥರಾವರಿ.
                                                                      ಒಂದು ಮಣ್ಣಿನ ಜೀವ ಎಂದೂ...

ಹರಕೆಯಿದ್ದರೆ ಯಾವ ಅರಕೆ ನಮ್ಮ ಅಮ್ಮನ ಮಡಿಲಲಿ
ಹಾಳುಗೆನ್ನೆಯನಾಲಿ ನನ್ನವು ಅನ್ನಪೂರ್ಣೆಯ ಗುಡಿಯಲಿ
ಹೂವು ಸಾವಿರ ಸೇರಿ ಒಂದೇ ಹಾರವಾಗುವ ಪಕ್ಷಕೆ
ಲಕ್ಷ ಮಕ್ಕಳೇ ಅಕ್ಷಮಾಲೆ ನಮ್ಮ ತಾಯಿಯ ವಕ್ಷಕೆ.
                                                                      ಒಂದು ಮಣ್ಣಿನ ಜೀವ ಎಂದೂ...


* ಸಿ. ಅಶ್ವಥ್ ರವರ ತೂಗುಮಂಚ ಸಂಕಲನದ ಗೀತೆ. ಹೆಚ್ಚೆಸ್ವಿ ಅವರ ಸಾಹಿತ್ಯ ಎಂದು ಕೇಳಿ ಗೊತ್ತಷ್ಟೆ, ಖಾತ್ರಿಯಿಲ್ಲ.

Download this song

Saturday, 15 December 2012

ನವೋದಯದ ಕಿರಣಲೀಲೆ / Navodayada kiranaleele

ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.

                                  ನದನದಿಗಳ ನೀರಿನಲ್ಲಿ
                                  ಗಿರಿವನಗಳ ಮುಡಿಗಳಲ್ಲಿ
                                  ಗಾನ ಕಲಾ ಕಾವ್ಯ ಶಿಲ್ಪ
                                  ಗುಡಿಗೋಪುರ ಶಿಖರದಲ್ಲಿ
                                  ಶುಭೋದಯವ ತೆರೆದಿದೆ.

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರತಂತ್ರದ ಅಟ್ಟಹಾಸ
ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ.

                                  ಹಿರಿಯರಲ್ಲಿ ಕಿರಿಯರಲ್ಲಿ
                                  ಹಳಬರಲ್ಲಿ ಹೊಸಬರಲ್ಲಿ
                                  ನವಚೇತನದುತ್ಸಾಹದ
                                  ಚಿಲುಮೆಚಿಮ್ಮುವೆದೆಗಳಲ್ಲಿ
                                  ಶುಭೋದಯವ ತೆರೆದಿದೆ.

                                                                          - ಜಿ. ಎಸ್. ಶಿವರುದ್ರಪ್ಪ

Download this song

Thursday, 8 November 2012

ಮಾತಾಡೇ ನೀರೆ ಮಾತಾಡೆ... / Maatade neere maatade...

ಮಾತಾಡೇ ನೀರೆ ಮಾತಾಡೆ
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                         ಮಾತಾಡೇ...

ಸುಮ್ಮನೆ ಇದ್ದರು ಕೆಣಕುತ ಬಂದು
ಬಿಮ್ಮನೆ ಕುಳಿತರು ಬಳಸುತ ನಿಂದು
ಒಡನಾಡ ಬಂದೋಳು ನೀನಲ್ಲವೇ
ಹರೆಯದ ಸಿರಿ ಮಿಂಚಿ ಮೆರೆವಾಗ
ಹುರುಪಿನ ಸಿಹಿ ಹಂಚಿ ಹರಿವಾಗ 
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                        ಮಾತಾಡೇ...


ಹುಣ್ಣಿಮೆ ಮೂಡಲು ಕಣ್ಣಲೆ ಕರೆದು
ತಣ್ಣನೆ ಹೊತ್ತಲಿ ನಲ್ಮೆಯ ಮಿಡಿದು
ಜೊತೆಯಾಗಿ ಬೆರೆತೋಳು ನೀನಲ್ಲವೇ
ಒಸಗೆಯ ಬಿಸಿ ತಾಗಿ ನಗುವಾಗ
ಬೆಸುಗೆಯ ಸುಖ ಸಾರ ಸಿಗುವಾಗ
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                       ಮಾತಾಡೇ...

                                                                                               - ಪ್ರೊ. ದೊಡ್ಡರಂಗೇಗೌಡ

Download this song