ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Monday, 31 December 2012

ಬಾ ಬಾಳಿನ ಕತ್ತಲಲಿ / Baa balina kattalali

ಬಾ ಬಾಳಿನ ಕತ್ತಲಲಿ ದೀವಿಗೆಯನು ಬೆಳಗು
ಥಳಥಳಿಸಲಿ ಕಾಂತಿ ಎಲ್ಲ ಮನೆಯ ಒಳಗು ಹೊರಗು

ಸುತ್ತ ಕವಿದ ಅಜ್ಞಾನದ ಮೊತ್ತವನ್ನು ಮುತ್ತಲು
ಅರಿವ ಪ್ರಭೆಯ ಪಡೆಪತಾಕೆ ಶೌರ್ಯದಿಂದ ಎತ್ತಲು
ಆರದಂತೆ ಭಸ್ಮಗೊಳಿಪ ಉರಿಕಿಚ್ಚಿನ ಹುಚ್ಚು
ಜೀವನಗಳ ದೀಪ್ತಗೊಳಿಸುವಂಥ ಹಣತೆ ಹಚ್ಚು

ಮನುಜ ಮನುಜರೆದೆಗಳಲ್ಲಿ ಬೇರೂರಿದ ಭೀತಿಯ
ಹೊಡೆದಟ್ಟುತ ನೆಲೆಗಾಣಿಸು ನಿರುಪಮ ಪ್ರೀತಿಯ
ಬಿರಿದ ಬದುಕುಗಳನು ಬೆಳಕ ಬೆಸುಗೆಯಿಂದ ಬಂಧಿಸು
ಮುರಿದ ಮನಸುಗಳನು ಮರಳಿ ಒಂದಾಗಿಸಿ ಹೊಂದಿಸು

ಮೇಲು ಕೀಳು ಎಣಿಕೆಯಳಿದು ಸರಿಸಮಾನ ಭಾವನೆ
ಬಗೆದು ಜನತೆ ಹೋಲುತಿರಲಿ ಒಂದೇ ಬಳ್ಳಿ ಹೂವನೆ
ಪ್ರತಿದಿನವೂ ದೀಪಾವಳಿ ಒಸಗೆಯಾಗಿ ತೊಳಗಲಿ
ಬೆಳಕ ನಂಬಿ ಬೆಳಕು ತುಂಬಿ ಬೆಳಕಾಗಿಯೆ ಅರಳಲಿ

* ಗೀತ ಸಂಪದ ಸಂಕಲನದ ಗೀತೆ

 Download this song

No comments:

Post a Comment