ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Tuesday 4 October 2011

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು / Ello hutti ello beledu

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..

ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು, ಸದಾ....
ತಪ್ತಕಾಮಿನಿ ನನ್ನ ಶಾಲ್ಮಲಾ..

ಭೂಗರ್ಭದ ಮೌನದಲ್ಲಿ ಧುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು, ಸದಾ....
ಸುಪ್ತಮೋಹಿನಿ ನನ್ನ ಶಾಲ್ಮಲಾ..

ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ,
ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ, ಸದಾ....
ಗುಪ್ತಗಾಮಿನಿ ನನ್ನ ಶಾಲ್ಮಲಾ..


                                                            - ಚಂದ್ರಶೇಖರ ಪಾಟಿಲ

1 comment:

  1. ನಮ್ಮ ಅಮ್ಮನ ತುಂಬಾ ಇಷ್ಟವಾದ ಹಾಡು, ದೂರದರ್ಶನದಲ್ಲಿ ಬಂದ ಈ ದಾರವಾಹಿಯ ಹಿಮ್ಮೇಳದ ಅಶ್ವಥ್ ಹಾಡಿದ ಹಾಡು
    ಅಪ್‌ಲೋಡ್ ಮಾಡಿದ್ದಿಕ್ಕೆ ತುಂಬಾ ಧನ್ಯವಾದಗಳು.

    ReplyDelete