ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Thursday, 22 February 2018

ಹೆಂಡತಿ ಅಂದರೆ ಖಂಡಿತ ಅಲ್ಲ / Hendati andare khandita alla!!

ಹೆಂಡತಿ ಅಂದರೆ ಖಂಡಿತ ಅಲ್ಲ
ದಿನವೂ ಕೊರೆಯುವ ಭೈರಿಗೆ!
ಭಂಡರು ಯಾರೋ ಆಡುವ ಮಾತಿದು,
ಬೈದವರುಂಟೆ ದೇವಿಗೆ?!

ಸಣ್ಣ ಸಂಬಳದ ದೊಡ್ಡ ಗಂಡನನು
ಸಾಕುವ ಹೆಣ್ಣಿನ ಕಷ್ಟ!
ಹೆಣ್ಣಿಗೆ ಮಾತ್ರವೇ ಗೊತ್ತು
ಸಾಕಿ ಬೈಸಿಕೊಳ್ಳೊ ಅನಿಷ್ಟ!

ಹೆಂಡತಿ ಅಂದರೆ ಖಂಡಿತ ಅಲ್ಲ
ಭಾರೀ ಕತ್ತರಿ ಜೇಬಿಗೆ!
ಬಿರಡೆಯಲ್ಲವೆ, ಅವಳು ಗಂಡಿನ
ದುಂದುಗಾರಿಕೆಯ ತೂಬಿಗೆ!

ಹೆಂಡತಿಯೆಂದರೆ ಚಂಡಿಕೆಯಂತೆ
ಬೋಳು ಬೋಳಾದ ಬಾಳಿಗೆ!
ಅರಳಿದ ಗರಿ ಗರಿ ಸಂಡಿಗೆಯಂತೆ
ಬಿಸಿ ಬಿಸಿ ಅನ್ನದ ಸಾರಿಗೆ!

ಅನ್ನಿಸಿಕೊಂಡೂ ಮನ್ನಿಸಿ ನಗುವ
ಹೆಂಡತಿ ಕೇವಲ ಹೆಣ್ಣೇ!
ಗಂಡತಿ ಕೂಡಾ ಹೌದು ಅವಳನು
ಅನ್ನುವ ಬಾಯಿ ಮಣ್ಣೆ!

ಹೆಂಡತಿ ಎಂದರೆ ಒಳಗಿನ ಹರುಕನು
ಮರೆಸುವ ಬಣ್ಣದ ಶಾಲು!
ಮೆಟ್ಟೂ ಆಗಿ ಜುಟ್ಟೂ ಆಗಿ
ಕಾಯುವಂತ ಕರುಣಾಳು!


                                             - ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ

Saturday, 18 February 2017

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು/ Nee nan attig belakangidde nanju

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು
ಮಾಗಿ ಕುಗ್ತು ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು
ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು.

ಸೀರಂಗ್ಪಟ್ನ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ
ಸಂಗಂದಲ್ಲಿ ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು.

ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರಾತ್ರಿ ಬಿತ್ತು ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕಲ್ವ ನಂಜಿ
ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ.

                                              - ಜಿ. ಪಿ. ರಾಜರತ್ನಂ

Tuesday, 15 November 2016

ರಾತ್ರಿಯ ತಣ್ಣನೆ ತೋಳಿನಲಿ / Ratriya Tannane Tolinali

ರಾತ್ರಿಯ ತಣ್ಣನೆ ತೋಳಿನಲಿ, ಮಲಗಿರೆ ಲೋಕವೆ ಮೌನದಲಿ,
ಯಾರೋ ಬಂದು, ಹೊಸಿಲಲಿ ನಿಂದು, ಸಣ್ಣಗೆ ಕೊಳಲಿನ ದನಿಯಲ್ಲಿ
ಕರೆದರಂತಲ್ಲೆ ಹೆಸರನ್ನು.
ಕರೆದವರಾರೇ ನನ್ನನ್ನು?

ಬೇಗೆಗಳೆಲ್ಲಾ ಆರಿರಲು, ಪ್ರೀತಿಯ ರಾಗ ಹಾಡಿರಲು,
ಭೂಮಿಯ ತುಂಬಾ ಹುಣ್ಣಿಮೆ ಚಂದಿರ
ಬಣ್ಣದ ಮಾಯೆಯ ಹಾಸಿರಲು,
ಕರೆದರಂತಲ್ಲೆ ಹೆಸರನ್ನು. ಕರೆದವರಾರೇ ನನ್ನನ್ನು?

ಹಸಿರು ಮರಗಳ ಕಾಡಿನಲಿ, ಬಣ್ಣದ ಎಲೆಗಳ ಗೂಡಿನಲಿ,
ಮರಿಗಳ ಕೂಡಿ ಹಾಡುವ ಹಕ್ಕಿಯ
ಸಂತಸ ಚಿಮ್ಮಲು ಹಾಡಿನಲಿ.
ಕರೆದರಂತಲ್ಲೆ ಹೆಸರನ್ನು, ಕರೆದವರಾರೇ ನನ್ನನ್ನು?

ಹೇಗೆ ಇದ್ದರೆ? ಎಲ್ಲಿ ಹೋಗಲಿ? ಕಂಡರೆ ಹೇಳಿ ಗುರುತನ್ನು.
ನಿದ್ದೆಯ ಕರೆದು ಕಾಯುತ್ತಿರುವೆ,
ಎಂತಹ ಹೊತ್ತಿನಲು ಅವರನ್ನು.
ಕರೆದವರಾರೇ ನನ್ನನ್ನು? ಕರೆದರೆ ನಿಲ್ಲೇ ನಾನಿನ್ನು.

                                                   – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Tuesday, 16 August 2016

ಸಂಜೆ ಬಾನಿನಂಚಿನಲ್ಲಿ / Sanje Baaninanchinalli

ಸಂಜೆ ಬಾನಿನಂಚಿನಲ್ಲಿ
ಬಿದ್ದ ಬಿದಿಗೆ ಚಂದಿರ
ಶಚೀ ತೀರ್ಥದಾಳದಲ್ಲಿ
ಶಕುಂತಲೆಯ ಉಂಗುರ.

ದೂರ್ವಾಸರ ಶಾಪವಿಗೋ
ಕವಿಯುತಿಹುದು ಸುತ್ತಲೂ,
ಕಂಡುದೆಲ್ಲ ಜಾರುತಿಹುದು
ಮೆಲ್ಲನಿರುಳ ತಮದೊಳು.

ಅಸಹಾಯಕ ತಾರೆ ಬಳಗ
ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು
ಉಕ್ಕಿ ಬರುವ ದುಃಖವ.


                                       - ಜಿ. ಎಸ್. ಶಿವರುದ್ರಪ್ಪ

Monday, 30 May 2016

ದಿನ ಹೀಗೆ ಜಾರಿ ಹೋಗಿದೆ/ Dina heege jaari hogide

ದಿನ ಹೀಗೆ ಜಾರಿ ಹೋಗಿದೆ
ನೀನೀಗ ಬಾರದೆ,
ಜತೆಯಿರದ ಬಾಳ ಜಾತ್ರೆಯಲಿ
ಸೊಗಸೇನಿದೆ.

ಅರಳಿ ಅನೇಕ ಹೂಗಳು
ಬರಿದೆ ಕಾದಿವೆ,
ಹಿಮದ ಕಠೋರ ಕೈಯಲಿ
ನರಳಿ ಕೆಡೆದಿವೆ.

ಜತೆಯ ಕಾಣದೀಗ ಹಕ್ಕಿ
ಅನಾಥವಾಗಿದೆ,
ಋತು ಚೈತ್ರ ಜಾರಿ ಹೋಗಿದೆ
ಗ್ರೀಷ್ಮ ಬರುತಿದೆ.

ದುಗುಡ ನಿಧಾನ ಬೆಳೆಯುತ
ಬಾಳ ಮುಸುಕಿದೆ,
ಉಳಿದೇನಿತಾಂತ ಕಾಯುತ
ಕನಸು ಮಾಸಿದೆ.

                                                         - ಸುಬ್ರಾಯ ಚೊಕ್ಕಾಡಿ 

Wednesday, 18 March 2015

ಬದುಕು ಮಾಯೆಯ ಮಾಟ/Baduku Mayeya Maata

ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಬ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು

ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ

                                      - ಅಂಬಿಕಾತನಯದತ್ತ   

ತಂಬುಲದ ತುಟಿಯ ತೋರಿ/ Tambulada tutiya tori

ತಂಬುಲದ ತುಟಿಯ ತೋರಿ ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರ ಸಂಜಿ ಏನ?

ಮೇಲ ಸೆರಗು ಮೆಲ್ಲಗ ಸರಿಸಿ ವಾರಿ ನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರ ಇರುಳು ಏನ?

ಅಲಿದು ಗಿಲಿದು ಒಲಿದು ಒಲಿದು ನೆಟ್ಟ ನೋಟ ಕೀಳಲಾರ್ದ
ತಣ್ಣಗಾಗಿ ನಿಂತವಳ್ಯಾರ ನಸುಕು ಏನ?

ಹೊತ್ತೊತ್ತಿಗೆ ಹೊಂದಿಕೆಯಾಗಿ ಹಲವಾಡಿ ಒಕಾಟೆಯಾಗಿ
ಹೌದ ಚೆನ್ನಿ ಹೌದ ಚೆಲುವಿ ನನ್ನವಳೇನ?

                                                             - ಅಂಬಿಕಾತನಯದತ್ತ


Sunday, 21 December 2014

ಕೊಲ್ಲುವುದಾದರೆ ಕೊಂದುಬಿಡು / kolluvudaadare kondubidu

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ.

ದುಂದಿಯು ಧಗ ಧಗ ಧಗ ಉರಿದಂತೆ
ಅಂದು ನಿನ್ನ ಪ್ರೀತಿ
ಹೆಪ್ಪುಗಟ್ಟಿರುವ ಹಿಮದಂತೆ
ಇಂದು ನಿನ್ನ ರೀತಿ.

ಕಾಳಾಗದೆ ನಿನ್ನಾಳದ ಪ್ರೀತಿ
ಆಯಿತೇ ಬರೀ ಜೊಳ್ಳು ಹೇಳು
ಪ್ರೀತಿಯ ಸೇತುವೆಯಂತೆ ತೋರಿ
ಮರೆಯಾಯಿತೆ ಮಳೆಬಿಲ್ಲು.

ಇನ್ನೂ ಏಕೀ ಮುಚ್ಹುಮರೆ
ತೆರೆಗಳ ನೀ ಸರಿಸು
ತೊರೆಯುವುದಾದರೆ ತೊರೆದುಬಿಡು
ಇಲ್ಲವೇ ಸ್ವೀಕರಿಸು.

                                            -  ಬಿ ಆರ್ ಲಕ್ಷ್ಮಣರಾವ್

Wednesday, 12 November 2014

ಯಾಕೆ ಕಾಡುತಿದೆ ಸುಮ್ಮನೆ ನನ್ನನು / Yake Kadutide Summane Nannanu

ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ

ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ

ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ

                                        - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಮರೆಗೆ ನಿಂತು ಕಾಯುತಿರುವ / Marege Nintu Kayutiruva

ಮರೆಗೆ ನಿಂತು ಕಾಯುತಿರುವ ಕರುಳು ಯಾವುದು
ಸಾವಿರ ಸೋಜಿಗವ ತೆರೆವ ಬೆರಳು ಯಾವುದು

ಸುತ್ತ ಹೊಳೆವ ಹಸಿರಲಿ
ಮತ್ತೆ ಪಕ್ಷಿ ದನಿಯಲಿ
ಎತ್ತೆತ್ತಲು ಅಲೆದು ಬಂದು
ಮಳೆ ಚೆಲ್ಲುವ ಮುಗಿಲಲಿ

ಕಣ್ಣ ಕೊಟ್ಟು ಹಗಲಿಗೆ
ಕಪ್ಪನಿಟ್ಟು ಇರುಳಿಗೆ
ಇನ್ನಿಲ್ಲದ ಬಣ್ಣ ಬಳಿದು
ಚಿಟ್ಟೆಯಂತ ಮರುಳಿಗೆ

ಹೊರಗೆ ನಿಂತು ದುಡಿಯುವ
ಫಲ ಬಯಸದೆ ಸಲಹುವ
ತಾಯಿ ಜೀವವೆ ನಮೋ
ಕಾಯ್ವ ಕರುಣೆಯೇ ನಮೋ

                                    – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Sunday, 2 November 2014

ಹೊತ್ತಿತೋ ಹೊತ್ತಿತು ಕನ್ನಡದ ದೀಪ / Hottito hottitu kannadada deepa

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ


ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ

                                            - ಡಾ.ಸಿದ್ದಯ್ಯ ಪುರಾಣಿಕ

Sunday, 4 May 2014

ಕಟ್ಟುವೆವು ನಾವು / Kattuvevu Naavu

ಕಟ್ಟುವೆವು ನಾವು ಹೊಸ ನಾಡೊಂದನು, - ರಸದ
                                              ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

                      ನಮ್ಮೆದೆಯ ಕನಸುಗಳೇ ಕಾಮಧೇನು
                      ಆದಾವು, ಕರೆದಾವು ವಾ೦ಛಿತವನು;
                      ಕರೆವ ಕೈಗಿಹುದೋ ಕನಸುಗಳ ಹರಕೆ;
                      ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

                      ನಾವು ಹಿಂದೆಗೆವೆವೇ? ವೀರ ತರುಣರು ನಾವು!
                      ಒಂದೆ ನೆಗೆತಕೆ ನೆಗೆವೆವೋ ಕಂದಕವನು,
                      ಕುಟ್ಟಿ ಪುಡಿಮಾಡುವೆವು ಕೋಟೆಗಳನು,
                      ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

                      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
                      ನೈರಾಶ್ಯದಗ್ನಿಮುಖದಲ್ಲು ಕೂಡ
                      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
                      ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

                      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
                      ಸಮಬಗೆಯ ಸಮಸುಖದ ಸಮದುಃಖದ
                      ಸಾಮರಸ್ಯದ ಸಾಮಗಾನಲಹರಿಯ ಮೇಲೆ
                      ತೇಲಿ ಬರಲಿದೆ ನೋಡು, ನಮ್ಮ ನಾಡು!

ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು!

                      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
                      ಯುವಜನದ ನಾಡ ಗುಡಿಯು;
                      ಅದರ ಹಾರಾಟಕ್ಕೆ ಬಾನೆ ಗಡಿಯು,
                      ಬರಲು ಬಿಡೆವೆಂದಿಗೂ ಅದಕೆ ತಡೆಯು!
                      ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
                      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
                      ಕೊಟ್ಟೆವಿದೋ ವೀಳೆಯವನು;
                      ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
                      ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
                                                                     ಬೀಡೊಂದನು

                                                            - ಮೊಗೇರಿ ಗೋಪಾಲಕೃಷ್ಣ ಅಡಿಗ

Monday, 30 December 2013

ಒಡೆದು ಬಿದ್ದ ಕೊಳಲು ನಾನು.. / Odedu bidda Kolalu naanu

ಒಡೆದು ಬಿದ್ದ ಕೊಳಲು ನಾನು,
ನಾದ ಬರದು ನನ್ನಲಿ;
ವಿನೋದವಿರದು ನನ್ನಲಿ.

ಕಿವಿಯನೇಕೆ ತೆರೆಯುತಿರುವೆ?
ಎದೆಯೊಳೇನ ಬಯಸುತಿರುವೆ?
ದೊರೆಯದೇನೂ ನನ್ನಲಿ!
                       
ನಲ್ಲೆ ಬಂದು ತುಟಿಗೆ ಕೊಳಲ
ನೊತ್ತಿ ಉಸುರ ಬಿಟ್ಟಳು;
ತನ್ನ ಒಲವಿನಿಂದ್ರಧನುವ
ಹರಿದು ಇಳಿದು ಬಿಟ್ಟಳು;
ಬಣ್ಣ ಬಣ್ಣದೆನಿತೋ ಹಾಡ
ನಿಲ್ಲಿ ಚೆಲ್ಲಿ ಕೊಟ್ಟಳು.


ಹಾಡಿ ಹಾಡಿ ಬೇಸರಾಗಿ
ನೆಲಕೆಸೆದಳು ಕೊಳಲನು;
ಇಂದು ಮೌನದುಸುಬಿನಲ್ಲಿ
ಹುಗಿದಳೆನ್ನ ಮನವನು.


       ಕೊಳಲು ಬೇಸರಾಯಿತೇನೊ,
       ಹೊಸ ಹಂಬಲ ಹಾಯಿತೇನೊ,
       ಎದೆಯ ಗಾಯ ಮಾಯಿತೇನೊ,
       ಬಿಸುಟೆದ್ದಳು ಕೊಳಲನು.

ಕಂಪು ಗಾಳಿ ಅಲೆ ಅಲೆ
ತೇಲಿ ಬರಲು ಮಲೆ ಮಲೆ
ಬಿದಿರ ಕೊಳಲ ಮಾಡಿ ಹಾಡಿ
ತೂಗುತಿರಲು ಹೊಂದಲೆ

ಒಡೆದ ಕೊಳಲ ಪಾಡ ನೋಡು;
ಇನ್ನೆಲ್ಲಿದೆ ಸುಗ್ಗಿ ಎಂದು
ಮಣ್ಣಿನಂತೆ ಮಲಗಿತು.
ಮುಗ್ಗಿ ಮುರುಟಿ ನಲುಗಿತು.

ಮನ ಯಮುನಾ ತೀರದಲ್ಲಿ
       ಕುಣಿದು ಬರೆ ಸಮೀರನು,
ನೆಳಲಿನಿಂದಲೆದ್ದು ಬರಲು
       ಗೋಪ ಗೋಪಿಕೆಯರು,
ಒಡೆದು ಬಿದ್ದ ಕೊಳಲ ಕೊಳಲು
       ಬರುವನೊಬ್ಬ ಧೀರನು,
       ಅಲ್ಲಿವರೆಗೆ ಮೃಣ್ಮಯ,
       ಬಳಿಕ ನಾನು ಚಿನ್ಮಯ!

                                                                - ಎಮ್. ಗೋಪಾಲ ಕೃಷ್ಣ ಅಡಿಗ

ಇದು ಅಡಿಗರು ಬರೆದ ಕವನದ ಪೂರ್ಣಪಾಠ. - ವಸು

Friday, 6 December 2013

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene

ಯಾಕೋ ಕಾಣೆ ರುದ್ರ ವೀಣೆ
ಮಿಡಿಯುತಿರುವುದು
ಜೀವದಾಣೆಯಂತೆ ತಾನೆ
ನುಡಿಯುತಿರುವುದು.

ತಂತಿ ಮಿಂಚಿ ನಡುಗುತಿದೆ
ಸೊಲ್ಲು ಸಿಡಿದು ಗುಡುಗುತಿದೆ
ಮಿಡಿದ ಬೆರಳು ಅಡಗುತಿದೆ
ಮುಗಿಲ ಬಯಲಲಿ.

ಚಿಕ್ಕೆ ಬಾಲ ಬೀಸುತಿವೆ
ಸೂರ್ಯಚಂದ್ರ ಈಸುತಿವೆ
ಹೊಸ ಬೆಳಕನೆ ಹಾಸುತಿವೆ
ಕಾಲ ಪಥದಲಿ.

ಧರ್ಮಾಸನ ಹೊರಳುತಿವೆ
ಸಿಂಹಾಸನ ಉರುಳುತಿವೆ
ಜಾತಿ ಪಂಥ ತೆರಳುತಿವೆ
ಮನದ ಮರೆಯಲಿ.

ನೆಲದ ಬಸಿರೊಳುರಿಯುತಿದೆ
ಬೆಟ್ಟದೆದೆಯು ಬಿರಿಯುತಿದೆ
ನೀರು ಮೀರಿ ಹರಿಯುತಿದೆ
ಕೆಂಪು ನೆಲದಲಿ.

                                       -ಅಂಬಿಕಾತನಯ ದತ್ತ

Saturday, 9 November 2013

ಯಾವ ರಾಗಕೊ ಏನೊ / yaava raagako eno

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

                                                        – ಜಿ. ಎಸ್. ಶಿವರುದ್ರಪ್ಪ

Download this song

Thursday, 24 October 2013

ನಿನ್ನ ಕಂಗಳ ಕೊಳದಿ / Ninna Kangala Koladi

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು?
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು.

ಎದೆಗೆ ತಾಪದ ಉಸಿರು
ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ
ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು.

ನಾನೊಂದು ದಡದಲ್ಲಿ
ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು

                                        - ಎಮ್. ಎನ್. ವ್ಯಾಸ ರಾವ್

Download This Song

Wednesday, 18 September 2013

ಭೂಮಿತಾಯಿಯ ಚೊಚ್ಚಿಲ ಮಗ / bhoomitaayiya chocchila maga

೧
ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?
೨
ಮುಗಿಲೆಂಬುವದು
ಕಿಸಿದಿತು ಹಲ್ಲು!
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು!
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು!
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು!
ಎದೆಯ ಗೂಡಿನೊಳು
ಚಿಂತೆಯ ಗೂಗಿ!
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ!
ಮೋರೆಯು ಸಾವನು
ಅಣಕಿಸುತಿಹುದು!
ಕೊರಳಿಗೆ ಹತ್ತಿದೆ
ಸಾಲದ ಶೂಲ!
ಆದರು ಬರದೊ
ಯಮನಿಗೆ ಕರುಣ 
ಉಸಿರಿಗೆ ಒಮ್ಮೆ
ಜನನಾ ಮರಣಾ.
೩
ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು!
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೋ ಬಂದು!
ಸಾವಿನ ಬೆಳಕದು
ಕಾಣುವದೆಂದು?
ಎಂದೋ ಎಂದು
ಕನವರಿಸುವದು
ತಳಮಳಿಸುವದು!

                                 - ಅಂಬಿಕಾತನಯ ದತ್ತ

*ಬೇಂದ್ರೆಯವರ "ನಾದಲೀಲೆ" ಕವನ ಸಂಕಲನದ ಕವನ. ಕವಿತೆಯದೇ ಹೆಸರಿನಲ್ಲಿ ಮೂಡಿಬಂದ ಚಲನಚಿತ್ರದಲ್ಲಿ ಬಳಕೆಯಾಗಿದೆ.  ಗೀತೆ ನನ್ನ ಬಳಿ ಇಲ್ಲ. ಇದ್ದವರು ಕಳುಹಿಸಿದರೆ ಇಲ್ಲಿ ಜೋಡಿಸುವೆ - ವಸು

Saturday, 8 June 2013

ಬಡವನಾದರೆ ಏನು ಪ್ರಿಯೆ / Badavanaadare Enu Priye

ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ

ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ
ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ

ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ
ರೆಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ

ಬೆವರು ಹರಿಸಿ ಹೂವ ಬೆಳೆಸಿ ಮುಡಿಯಲಿಟ್ಟು ನಗಿಸುವೆ
ಭುಜಕೆ ಭುಜವ ಹಚ್ಚಿ ನಿಂತು ತೋಳುಬಂಧಿ ತೊಡಿಸುವೆ

ಹರಿವ ನದಿಗೆ ಅಡ್ಡ ನಿಂತು ನಿನಗೆ ದಾರಿ ಮಾಡುವೆ
ಬಿಸಿಲು ಮಳೆಯ ಚಳಿಯ ನುಂಗಿ ನೆರಳು ಬೆಳಕು ಆಗುವೆ


* ರಚನೆ ಯಾರದ್ದೆಂದು ತಿಳಿದಿಲ್ಲ, ತಿಳಿಸಿದರೆ ತಿದ್ದುವೆ.


Download This Song

Thursday, 25 April 2013

ಮೆರೆಯಬೇಡವೋ ಮನುಜ / Mereyabedavo Manuja

ಮೆರೆಯಬೇಡವೋ ಮನುಜ....
ಅಂತರಾಳದ ಅಂಕೆ ಮೀರಿ,
ಕೊಂಕು ಬೀರಿದೆ ಸುಂಕ ಕಾದಿದೆ...

ನೀತಿ ಮೀರದೆ, ನೀನು ಭ್ರಾಂತಿ ಕಾಣದೆ,
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ.
ಡಂಭಾಚಾರವು ಏಕೋ ಏಕೋ?
ತುಂಬಾ ತೋರಿಕೆ ಏಕೋ ಏಕೋ?
ಸಹಜವಾಗಿ ಬಾಳಿ ಬದುಕಯ್ಯ...
                                                         ಮೆರೆಯಬೇಡವೋ ಮನುಜ....

ಡೌಲು ತೋರದೆ, ಎಂದು ಕೇಡು ಹೊಂಚದೆ,
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ.
ಪೊಳ್ಳು ಜಂಭವು ಸಾಕೋ ಸಾಕೊ
ಸುಳ್ಳು ವಂಚನೆ ಸಾಕೋ ಸಾಕೊ
ಸ್ನೇಹದಿಂದ ಲೋಕ ನೋಡಯ್ಯ...
                                                         ಮೆರೆಯಬೇಡವೋ ಮನುಜ....


                                                                                        - ಪ್ರೊ. ದೊಡ್ಡರಂಗೇಗೌಡ

Download This Song




Thursday, 18 April 2013

ಸಂಜೆಯಾಗುತಿದೆ.... / Sanjeyaagutide

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ... 
ತಾಳೆಯ ಮರಗಳು ತಲೆಯ ತೂಗುತಿವೆ ಕೆದರುತ ಇರುಳ ಜಡೆ 
ಅಂಜಿಕೆಯಾಗುವ ಮುನ್ನವೇ ಸಾಗುವ ಬೃಂದಾವನದ ಕಡೆ... 

ದಟ್ಟಡವಿಯಲಿ ಪುಟ್ಟ ಪಾಲಕರೋ! ಕತ್ತಲು ಕವಿಯುತಿದೆ 
ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ ಕಪ್ಪನು ಬಳಿಯುತಿದೆ 
ಕೃಷ್ಣ ಕಪಿಲೆಯರು ಕಾಣುವುದಿಲ್ಲ ಅಂಜಿಕೆ ಬೆಳೆಯುತಿದೆ 
ಅಂಜದಿರೆನುವನು ನಂದಕುಮಾರ ಮುರುಳಿಯ ತುಟಿಗಿಡುತ 
ಅಭಯನಾದವನು ಬಯಲಲಿ ತುಂಬಿದ ಕೊಳಲಲುಸಿರು ಬಿಡುತ 
ಇರುಳ ಬಾನಿನಲಿ ತೇಲುತ ಬಂತು ಹುಣ್ಣಿಮೆ ಬೆಳ್ಳಿ ರಥ.. 

ಎಲ್ಲಿ ನೋಡಿದರು ಬೆಳದಿಂಗಳ ಮಳೆ ಮಿದುವಾಯಿತು ನೆಲವು 
ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ ಕೋ ಎನ್ನುತ ಕೊಳವು 
ಬೆಣ್ಣೆಯ ಮೆತ್ತಿದ ತುಟಿಯನ್ನೋರೆಸುತಿದೆ ಆ ಯಮುನಾ ಜಲವು 
ಗೋಪ ಪಾಲಕರು ಕುಣಿಯುತಲಿಹರು ಕೊಳಲುಲಿ ಕೇಳುತ್ತಾ 
ಮರತ ಸಾಲುಗಳ ಒರತೆಯ ಬಗೆದು ಗೀತವ ಬಳುಕುತ್ತಾ*
ಹಸುಗಳ ಕೊರಳಿನ ಗಂಟೆಯಲೊದಿಸಿ ನಾದಕೆ ಸಿಲುಕುತ.... 
                                                              ತಾರಾ ಲೋಕವ ನಿಲುಕುತ್ತಾ... 


* ಹಾಡನ್ನು ಕೇಳಿ ಬರೆದುಕೊಂಡಿರುವುದು, ಈ ಒಂದು ಪದದ ಬಗೆಗೆ ಅನುಮಾನವಿದೆ