ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Monday, 3 September 2012

ಬಾರೊ ಸಾಧನಕೇರಿಗೆ / Baaro Saashana kerige

ಬಾರೊ ಸಾಧನಕೇರಿಗೆ,
ಮರಳಿ ನಿನ್ನೀ ಊರಿಗೆ....

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ?

ಮಲೆಯ ಮೊಗವೇ ಹೊರಳಿದೆ,
ಕೋಕಿಲಕೆ ಸವಿ ಕೊರಳಿದೆ,
ಬೇಲಿಗೂ ಹೂ ಬೆರಳಿದೆ,
ನೆಲಕೆ ಹರೆಯವು ಮರಳಿದೆ.
ಭೂಮಿತಾಯ್ ಒಡಮುರಿದು ಎದ್ದಳೊ,
ಶ್ರಾವಣದ ಸಿರಿ ಬರಲಿದೆ.

ಮೋಡಗಳ ನೆರಳಾಟವು,
ಅಡವಿ ಹೂಗಳ ಕೂಟವು,
ಕೋಟಿ ಜೆನ್ನೊಣಕೂಟವು,
ಯಕ್ಷಿ ಮಾಡಿದ ಮಾಟವು.
ನೋಡು ಬಾ ಗುಂಪಾಗಿ ಪಾತರ-
ಗಿತ್ತಿ ಕುಣಿಯುವ ತೋಟವು.

ಮರವು ಮುಗಿಲಿಗೆ ನೀಡಿದೆ.
ಗಿಡದ ಹೊದರೊಳು ಹಾಡಿದೆ
ಗಾಳಿ ಎಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
ತರದ ನೋಟವ ನೋಡಿದೆ?

                                                    - ಅಂಬಿಕಾತನಯದತ್ತ

1 comment: