ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 10 September 2012

ಮರೆತೇನೆಂದಾರ ಮರೆಯಲಿ ಹ್ಯಾಂಗ / Maretenendara mareyali hyaanga

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ-ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಪಂಚಭೂತದಾಗ ವಂಚನೆ ಕಂಡಿ
ಕಣ್ಣಿನಂಚಿನಾಗ ಹೊಸ ಜಗ ಕಂಡಿ
ಸೊನ್ನಿಗೆ ಆಕಾರ ಬರೆದೇನೆಂದಿ
ಬೇಲಿಗೆ ಗೋಡೆ ಕಟ್ಟುತೀನೆಂದಿ
ಸಚರಾಚರಗಳ ರಚನೆ ಮಾಡೋದಕ್ಕ
ಬೇರೊಬ್ಬ ಸೂರ್ಯನ ತರತೇನೆಂದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಕಣ್ಣೀರಿನ ಹೊಳಿಗಡ್ಡ ಕಟ್ಟಿದಿ
ಹರಿವ ನೆತ್ತರಕ ಒಡ್ಡ ಕಟ್ಟಿದಿ
ಮಡುವಿನ ನಡುವ ಕಾಲನೂರಿಕೊಂಡ
ಬತ್ತಿಯಾಗಿ ತಲಿ ಹೊತ್ತಿಸಿಕೊಂಡೆ
ಮನುಷ್ಯರ ಮುರಿದಿ ತೇರ ಕಟ್ಟಿದಿ
ಹತ್ತವತಾರದ ಕುದುರೆಯ ಜೋಡಿ...ಹಾ
ಹತ್ತಕುದಿರಿಯ ಹಳದಿ ದೇವರು
ಸ್ವಯಂ ಸೂರ್ಯ ನಾ ಬಂದೇನೆಂದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಬೆಂಕಿ ಹಚ್ಚಿದಿ ಬೇಲ್ಯಾಗ ನಿಂದಿ
ಸಿದ್ಧಸಿದ್ಧರ ಕುದ್ಧ ಒಗೆಸಿದಿ
ಹಂಗ ಬಿದ್ದ ಹಂಗಾಮರ ಬೆದಿಗಿ
ಕೈಯ ಬೀಸಿ ಕೈಲಾಸವ ಕರೆದಿ
ಹಳದಿ ಬಿತ್ತಿದಿ ಹಳದಿಯ ಬೆಳೆದಿ
ಮುಳ್ಳಬೇಲಿಗೂ ಹೂವಿನ ಹಳದಿ
ಬಣ್ಣದ ಹೆಸರಾ ಬದಲು ಮಾಡಿದ್ಯೋ
ಕಣ್ಣಿನ ಕಾಮಾಲೆ ತಿಳಿಯದೆ ಹೋದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಹರಕ ಹುಬ್ಬಿನ ತಿರುಕರ ಅರಸ
ಡೊಳ್ಳ ಹೊಟ್ಟೆಯ ಹಸಿದವರರಸ
ದಿನಾ ಹುಟ್ಟಿದಿ ದಿನಕೊಮ್ಮೆ ಸಾಯ್ತಿ
ಸುದ್ದಿಯ ಕಣ್ಣ ಒದ್ದಿ ಮಾಡಿದಿ
ಭೂಮಿನರ್ಧಕ ಸಾಯೋದ ಕಲಿಸಿ
ಸ್ವತಃ ಸಾಯಲಿಕಿ ಬಾರದೆ ಹೋದಿ
ಕಟ್ಟಿದ ಗೋಡೆಗೆ ಕಳಸ ಏರಿತು
ಬದುಕಿದ ಜೀವ ಕಥೆಯಾಗಿತ್ತೋ
ಬಟಾಬಯಲಿನಾಗ ಮಟಾಮಾಯವಾಗಿ
ಬೆಂಕಿ ಆರಿ ಆ ಬೆಂಕಿ ಆರಿ ಬರಿ ಬೆಳಕುಳಿದಿತ್ತೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

                                                                  -  ಡಾ. ಚಂದ್ರಶೇಖರ ಕಂಬಾರ

No comments:

Post a Comment