ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Thursday, 25 August 2011

ನೀನಿಲ್ಲದೆ ನನಗೇನಿದೆ! / Neenillade nanagenide

ನೀನಿಲ್ಲದೆ ನನಗೇನಿದೆ,
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ 
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ || ಪ ||

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೆ ನಾನು 
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು (೨)
ಎದೆಯಾಸೆ ಏನೋ ಎಂದು ನೀ ಕಾಣದಾದೆ 
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ 
ಬೆಳಕೊಂದೆ ನಿನ್ನಿಂದ ನಾ ಬಯಸಿದೆ || ನೀನಿಲ್ಲದೆ ||

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ 
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ (೨)
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು 
ಹೊಸ ಜೀವ ನಿನ್ನಿಂದ ನಾ ಪಡೆಯುವೆ 
ಹೊಸ ಲೋಕ ನಿನ್ನಿಂದ ನಾ ಕಾಣುವೆ || ನೀನಿಲ್ಲದೆ ||


                                                                  - ಎಂ. ಎನ್. ವ್ಯಾಸರಾವ್ 

3 comments:

 1. ಎಂ.ಎನ್.ವ್ಯಾಸರಾವ್ ಬರೆದದ್ದು ಅಲ್ವಾ?

  ReplyDelete
  Replies
  1. ಹಾಡನ್ನು ಕೇಳಿ ಬರೆದುಕೊಂಡಿದ್ದೆ. ಕವನ ಸಂಕಲನ ಇಲ್ಲ. ವ್ಯಾಸರಾಯರದ್ದು ಎಂದು ಕೇಳಿದಂತಿತ್ತು. ಖಾತ್ರಿಯಿರಲಿಲ್ಲ. ಈಗ ಸೇರಿಸಿದ್ದೇನೆ ನೋಡಿ. ತಿಳಿಸಿದ್ದಕ್ಕೆ ಧನ್ಯವಾದಗಳು. - ವಸು.

   Delete
 2. ನಿಮ್ಮ ಬ್ಲಾಗ್ ತುಂಬಾ ಇಷ್ಟವಾಯಿತು. ಭಾವಗೀತೆಗಳು ಮನುಷ್ಯನ ಭಾವನೆಗಳನ್ನು ಪ್ರತಿಬಿಂಬಿಸುವ ಸುಂದರ ರಚನೆಗಳು. ನನಗೆ ಭಾವಗೀತೆಗಳು, ಅದರಲ್ಲೂ ಎಂ.ಡಿ. ಪಲ್ಲವಿ ಮತ್ತು ಸಿ. ಅಶ್ವಥ್ ಅವರು ಹಾಡಿದ ಭಾವಗೀತೆಗಳು ಬಹಳ ಇಷ್ಟ. ನಿಮ್ಮ ಬರವಣಿಗೆ ಹೀಗೆಯೇ ಮುಂದುವರೆಯಲಿ...

  ReplyDelete